ಸುಳ್ಯ: ದೇವರಾಜ ಅರಸು ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ರೋಮಾಂಚನಕಾರಿ ಕೆಸರು ಗದ್ದೆ ಕ್ರೀಡಾಕೂಟ ಯಶಸ್ವಿ

News Sports

ಸುಳ್ಯ: ತಂತ್ರಜ್ಞಾನ ಯುಗದಲ್ಲಿ ಸಾಂಪ್ರದಾಯಿಕ ಆಚರಣೆಗಳು ಉಳಿಯಲು ಕೆಸರು ಗದ್ದೆ ಕ್ರೀಡೆಗಳು ಸಹಕಾರಿ – ಕೆ.ಎಂ. ಮುಸ್ತಫಾ

ಸುಳ್ಯ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸುಳ್ಯ ಕಾಂತಮಂಗಲದ ಮನಮೋಹನ ಪುತ್ತಿಲರವರ ಗದ್ದೆಯಲ್ಲಿ ದೇವರಾಜ ಅರಸು ವಸತಿ ನಿಲಯದ ವಿದ್ಯಾರ್ಥಿಗಳ ತಾಲೂಕು ಮಟ್ಟದ ರೋಮಾಂಚನಕಾರಿ ಕೆಸರು ಗದ್ದೆ ಕ್ರೀಡಾಕೂಟವು ಸಂಭ್ರಮದಿಂದ ಜರುಗಿತು.

ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫಾ ಅವರು ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. “ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಸಂಪ್ರದಾಯಗಳು ಮತ್ತು ಪ್ರಕೃತಿಯೊಂದಿಗೆ ಮನುಷ್ಯನಿಗಿರಬೇಕಾದ ಬಾಂಧವ್ಯಗಳು ಮರೆಯಾಗುತ್ತಿವೆ. ವಿದ್ಯಾರ್ಥಿ ದಶೆಯಿಂದಲೇ ಇಂತಹ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಇಂತಹ ಕ್ರೀಡಾಕೂಟಗಳು ಅತ್ಯಂತ ಸಹಕಾರಿಯಾಗಿದೆ” ಎಂದು ಅಭಿಪ್ರಾಯಪಟ್ಟರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ ವಹಿಸಿದ್ದರು. ಯುವಜನ ಸಂಯುಕ್ತ ಮಂಡಳಿಯ ಮಾಜಿ ಅಧ್ಯಕ್ಷ ಮನಮೋಹನ ಪುತ್ತಿಲ ಅವರು ತೆಂಗಿನಕಾಯಿ ಒಡೆಯುವ ಮೂಲಕ ಕ್ರೀಡಾಂಗಣವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಕ್ರೀಡಾಕೂಟಕ್ಕೆ ಜೆರ್ಸಿ ಮತ್ತು ಸ್ಪೋರ್ಟ್ಸ್ ಕ್ಯಾಪ್ ಪ್ರಾಯೋಜಿಸಿದ ‘ಆದಿ ವೆಜಿಟೇಬಲ್’ ಮಾಲಕ ಮಣಿಕಂಠ ಉಪಸ್ಥಿತರಿದ್ದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಮತಿ ಗೀತಾ ಸ್ವಾಗತಿಸಿ, ನಿಲಯ ಮೇಲ್ವಿಚಾರಕಿ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ತಾಲೂಕಿನ ದೇವರಾಜ ಅರಸು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಒಟ್ಟು 11 ವಿದ್ಯಾರ್ಥಿ ನಿಲಯಗಳ ಸುಮಾರು 700ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *