ಸುಳ್ಯ: ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿತನ ಹಾಗೂ ಅಧಿಕಾರಿಗಳ ಜಾಣಕಿವುಡಿಗೆ ಸುಳ್ಯದ ಜನತೆ ಇಂದು ಬೆಳ್ಳಂಬೆಳಗ್ಗೆಯೇ ತೀವ್ರ ಬೆಲೆ ತೆರುವಂತಾಗಿದೆ. ಶಾಲಾ-ಕಾಲೇಜು ಹಾಗೂ ಕಚೇರಿಗಳಿಗೆ ತೆರಳುವ ಧಾವಂತದಲ್ಲಿದ್ದ ಜನತೆಗೆ, ಏಕಾಏಕಿ ಅರ್ಧ ರಸ್ತೆ ಬಂದ್ ಮಾಡಿ ಆರಂಭಿಸಿದ ‘ಪ್ಯಾಚ್ ವರ್ಕ್’ ಕಾಮಗಾರಿಯಿಂದಾಗಿ ಭಾರಿ ಟ್ರಾಫಿಕ್ ಜಾಮ್ ಬಿಸಿ ತಟ್ಟಿದ್ದು, ಗಂಟೆಗಟ್ಟಲೆ ರಸ್ತೆಯಲ್ಲೇ ಪರದಾಡುವಂತಾಯಿತು.
ನಾವು ಮೊದಲೇ ವರದಿ ಮಾಡಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಇಲ್ಲಿನ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಮತ್ತು ರಸ್ತೆಯ ದುಸ್ಥಿತಿಯ ಬಗ್ಗೆ ನಾವು ಈಗಾಗಲೇ ವಿಶೇಷ ವರದಿ ಪ್ರಕಟಿಸಿ, ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೆವು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಮಾಧ್ಯಮದ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟರೂ ಸಂಬಂಧಪಟ್ಟ ಇಲಾಖೆಯಾಗಲಿ, ಅಧಿಕಾರಿಗಳಾಗಲಿ ಯಾವುದೇ ಪ್ರತಿಕ್ರಿಯೆ ನೀಡದೆ, ಕನಿಷ್ಠ ಎಚ್ಚರಿಕೆಯನ್ನೂ ವಹಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಇದರ ನೇರ ಪರಿಣಾಮವನ್ನು ಇಂದು ಸುಳ್ಯದ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ರಸ್ತೆಯಲ್ಲಿ ಮತ್ತೆ ನರಕಯಾತನೆ ಅನುಭವಿಸುವ ಮೂಲಕ ಎದುರಿಸುತ್ತಿದ್ದಾರೆ.
ಮಳೆಗಾಲದಲ್ಲೇ ಇಲಾಖೆಗೆ ಎಚ್ಚರ!
ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನವೇ ಮುಗಿಸಬೇಕಾದ ರಸ್ತೆ ದುರಸ್ತಿ ಕಾರ್ಯಗಳನ್ನು ಇಲಾಖೆ ಮರೆತು ನಿದ್ದೆ ಮಾಡುತ್ತದೆ. ಮಳೆ ಶುರುವಾದ ಮೇಲಷ್ಟೇ ಎಚ್ಚೆತ್ತುಕೊಂಡು ತರಾತುರಿಯಲ್ಲಿ ‘ಕಣ್ಣೊರೆಸುವ ತಂತ್ರ’ವಾಗಿ ಪ್ಯಾಚ್ ವರ್ಕ್ ನಾಟಕವಾಡುತ್ತಿದೆ. ಇದೀಗ ಮತ್ತೆ ಮಳೆಯ ನಡುವೆಯೇ ಗುಂಡಿ ಮುಚ್ಚುವ ಶಾಸ್ತ್ರ ಮಾಡುತ್ತಿದ್ದು, ಸಾರ್ವಜನಿಕರ ತೆರಿಗೆ ಹಣವನ್ನು ಅಕ್ಷರಶಃ ನೀರಿನಲ್ಲಿ ಹೋಮ ಮಾಡಿದಂತಾಗಿದೆ.


ಬೆಳಗಿನ ಪೀಕ್ ಅವರ್‌ನಲ್ಲಿ (Peak Hour) ಅವ್ಯವಸ್ಥೆ:
ಜನದಟ್ಟಣೆಯ ಸಮಯದಲ್ಲಿ ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ, ದಿಢೀರ್ ಆಗಿ ಬ್ಯಾರಿಕೇಡ್ ಹಾಕಿ ವಾಹನ ಸವಾರರನ್ನು ತೊಂದರೆಗೆ ಸಿಲುಕಿಸಲಾಗಿದೆ. ಸೂಕ್ತ ಪೂರ್ವಸಿದ್ಧತೆ ಅಥವಾ ಮುನ್ಸೂಚನೆ ಇಲ್ಲದೆ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ ಸುಳ್ಯದ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.
ಶಾಶ್ವತ ಪರಿಹಾರ ಎಂದು?
ಬರೀ ಮಳೆ ಬಂದಾಗ ಮಾತ್ರ ಅಧಿಕಾರಿಗಳಿಗೆ ರಸ್ತೆಯ ನೆನಪಾಗುತ್ತದೆ. ಮಾಧ್ಯಮಗಳ ಮೂಲಕ ಎಚ್ಚರಿಸಿದರೂ ಕನಿಷ್ಠ ಸೌಜನ್ಯದ ಪ್ರತಿಕ್ರಿಯೆಯನ್ನೂ ನೀಡದ ಇಲಾಖೆಗೆ ಸಾರ್ವಜನಿಕರ ಹಿತಾಸಕ್ತಿಗಿಂತ ಬೇರೆನು ಮುಖ್ಯವಾಗಿದೆ? ಇನ್ನಾದರೂ ಈ ಕಳಪೆ ‘ಪ್ಯಾಚ್ ವರ್ಕ್’ ಸಂಸ್ಕೃತಿಯನ್ನು ಬಿಟ್ಟು, ಶಾಶ್ವತ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಿದೆ. ಜನಸಾಮಾನ್ಯರ ತಾಳ್ಮೆಯನ್ನು ಪರೀಕ್ಷಿಸುವುದು ಇನ್ನಾದರೂ ನಿಲ್ಲಲಿ ಎಂಬುವುದು ಸಾರ್ವಜನಿಕರ ಮಾತಾಗಿದೆ.

Leave a Reply

Your email address will not be published. Required fields are marked *