ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದ್ದು, ಕಾಂಗ್ರೆಸ್ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಕೆಪಿಸಿಸಿ ವೀಕ್ಷಕರು, ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಪರ ಬಿರುಸಿನ ಮತಯಾಚನೆ ಮಾಡಿದರು.

ಮತದಾರರನ್ನು ನೇರವಾಗಿ ಭೇಟಿಯಾದ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಕುರಿತು ಜನರಿಗೆ ಸವಿಸ್ತಾರವಾಗಿ ವಿವರಿಸಿದರು. ಇದೇ ವೇಳೆ, ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಮಾಡುತ್ತಿರುವ ಅಪಪ್ರಚಾರ ಮತ್ತು ವಿರೋಧವನ್ನು ತೀವ್ರವಾಗಿ ಖಂಡಿಸಿದರು.
ಬಿಜೆಪಿ ವಿರುದ್ಧ ವಾಗ್ದಾಳಿ
ಸಾಮಾನ್ಯ ಜನರು ಇಂದು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಶಾಹಿದ್ ತೆಕ್ಕಿಲ್ ಆರೋಪಿಸಿದರು. “ಯುವಕರ ನಿರುದ್ಯೋಗ ಸಮಸ್ಯೆಗೆ ಕೇಂದ್ರ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡುವ ಭರವಸೆಯಂತೆ ಕಳೆದ ಹನ್ನೆರಡು ವರ್ಷಗಳಲ್ಲಿ ೨೪ ಕೋಟಿ ಉದ್ಯೋಗ ನೀಡಬೇಕಿತ್ತು, ಆದರೆ ಕನಿಷ್ಠ ೫೦ ಲಕ್ಷ ಉದ್ಯೋಗಗಳನ್ನೂ ಸೃಷ್ಟಿಸಿಲ್ಲ” ಎಂದು ಕಿಡಿಕಾರಿದರು. ಪ್ರಧಾನಿ ಮೋದಿಯವರಿಗೆ ಕೇವಲ ಅದಾನಿ-ಅಂಬಾನಿ ಮೇಲೆ ಮಾತ್ರ ಪ್ರೀತಿಯಿದ್ದು, ಉಳಿದ ಜನರನ್ನು ಕೇವಲ ಭಾವನಾತ್ಮಕ ವಿಚಾರಗಳ ಮೂಲಕ ಆಕರ್ಷಿಸುತ್ತಿದ್ದಾರೆ; ಇದೇ ಅವರ ದೊಡ್ಡ ಸಾಧನೆ ಎಂದು ಅವರು ವ್ಯಂಗ್ಯವಾಡಿದರು.
ಮುಖಂಡರ ಸಾಥ್
ಈ ಬಿರುಸಿನ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ವಿನಾಯಕ್, ಮಾಜಿ ಕಾರ್ಪೊರೇಟರ್ ಚಂದ್ರು ಹಾಗೂ ಸ್ಥಳೀಯ ಮುಖಂಡರಾದ ಶಿವಾಜಿ, ಸಿದ್ದಪ್ಪ, ಸುದರ್ಶನ್, ಅಬ್ದುಲ್ ಖಾದರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಸಚಿವ ಸಂತೋಷ್ ಲಾಡ್ ಅವರಿಂದ ಮರಾಠ ಸಮಾವೇಶ
ಇದೇ ವೇಳೆ, ಮತ್ತೊಂದೆಡೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕ್ಷೇತ್ರದಲ್ಲಿ ಮರಾಠ ಸಮುದಾಯದ ಬೃಹತ್ ಸಮಾವೇಶವನ್ನು ನಡೆಸಿ, ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವಂತೆ ಮನವಿ ಮಾಡಿದರು.




