ರಾಜಸ್ಥಾನ ಅಕ್ಟೋಬರ್ 01: ರಾಜಸ್ಥಾನದ ಸರಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೆಮ್ಮಿನ ಸಿರಫ್ ಕುಡಿದು ಇಬ್ಬರು ಮಕ್ಕಳು ಸಾವನ್ಪಪಿದ ಘಟನೆ ನಡೆದಿದ್ದು, ಕನಿಷ್ಠ 10 ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿರಪ್ ಸುರಕ್ಷಿತವಾಗಿದೆ ಎಂದು ಸಾಬೀತುಪಡಿಸಲು ಅದರ ಡೋಸ್ ತೆಗೆದುಕೊಂಡ ವೈದ್ಯರೂ ಸಹ ಪ್ರಜ್ಞೆ ತಪ್ಪಿ ಎಂಟು ಗಂಟೆಗಳ ನಂತರ ಅವರ ಕಾರಿನಲ್ಲಿ ಪತ್ತೆಯಾಗಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಸನ್ ಫಾರ್ಮಾ ಎಂಬ ಕಂಪನಿಯಿಂದ ತಯಾರಿಸಲ್ಪಟ್ಟ ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಎಂಬ ಜೆನರಿಕ್ ಕೆಮ್ಮಿನ ಸಿರಪ್‌ನಿಂದಾಗಿ ಈ ಸಾವು ಸಂಭವಿಸಿದೆ.

ರಾಜಸ್ಥಾನದ ಸಿಕಾರ್ ಜಿಲ್ಲೆಯ 5 ವರ್ಷದ ನಿತೀಶ್ ಎಂಬಾತನಿಗೆ ಕೆಮ್ಮು ಮತ್ತು ಶೀತ ಕಾಣಿಸಿಕೊಂಡಿದ್ದು, ಆತನ ಪೋಷಕರು ಭಾನುವಾರ ಚಿರಾನಾದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ಕರೆದೊಯ್ದರು. ವೈದ್ಯರು ಕೇಂದ್ರದಿಂದ ನೀಡಲಾದ ಕೆಮ್ಮಿನ ಸಿರಪ್ ಅನ್ನು ಸೂಚಿಸಿದರು ಮತ್ತು ನಿತೀಶ್‌ನ ತಾಯಿ ಆ ರಾತ್ರಿ 11.30 ರ ಸುಮಾರಿಗೆ ಅದನ್ನು ಅವನಿಗೆ ನೀಡಿದರು. ಮಧ್ಯರಾತ್ರಿ 3.30 ಸುಮಾರಿಗೆ ಆ ಬಾಲಕ ತೀವ್ರವಾಗಿ ಬಿಕ್ಕಳಿಕೆಯಿಂದ ಎದ್ದಿದ್ದ. ಬಿಕ್ಕಳಿಕೆ ಇದ್ದಿದ್ದರಿಂದ ಆತನ ತಾಯಿ ಆತನಿಗೆ ಸ್ವಲ್ಪ ನೀರು ಕುಡಿಸಿದ್ದಾಳೆ. ನೀರು ಕುಡಿದಾದ ಮೇಲೆ ಬಿಕ್ಕಳಿಕೆ ನಿಂತಿದೆ. ಆನಂತರ ಆತ ಮಲಗಿದ್ದಾನೆ. ಆದರೆ, ಮಲಗಿದಲ್ಲೇ ಆತ ಮೃತಪಟ್ಟಿದ್ದಾನೆ. ಬೆಳಗ್ಗೆ ಆತ ನಿಶ್ಚಲವಾಗಿರುವದುನ್ನು ಕಂಡು ಗಾಬರಿಯಾದ ಆತನ ತಂದೆ-ತಾಯಿ ಕೂಡಲೇ ಆಸ್ಪತ್ರೆಗೆ ಆತನನ್ನು ಕರೆದುಕೊಂಡು ಹೋಗಿದ್ದು ಅಲ್ಲಿ ಆತ ಅದಾಗಲೇ ಕೊನೆಯುಸಿರುವ ಎಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆ ಹೊರತಾಗಿ, ಮಾಲ್ಹಾ ಎಂಬ ಹಳ್ಳಿಯಲ್ಲಿ ಇದೇ ಔಷಧಿಯನ್ನು ಕುಡಿದಿದ್ದ 2 ವರ್ಷ ಬಾಲಕನೊಬ್ಬ ಇದೇ ರೀತಿ ಸಾವನ್ನಪ್ಪಿದ್ದಾನೆ. ಆ ಹುಡುಗ ಇದ್ದ ಮನೆಯಲ್ಲಿ ಇನ್ನೂ ಇಬ್ಬರು ಚಿಕ್ಕ ಮಕ್ಕಳಿದ್ದು ಅವರಿಗೂ ಕೆಮ್ಮಾಗಿತ್ತು. ಅವರಿಗೂ ಇದೇ ಔಷಧಿಯನ್ನು ನೀಡಲಾಗಿತ್ತು. ಅವರೆಲ್ಲರೂ ಸಹ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಮ್ಮಿನಿಂದ ಬಳಲುತ್ತಿದ್ದ ಹಲವಾರು ಮಕ್ಕಳನ್ನು ಅವರ ಹೆತ್ತವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಗ ಇದೇ ಟಾನಿಕ್ ಅನ್ನು ಕೆಲವು ವೈದ್ಯರು ಮಕ್ಕಳ ಪೋಷಕರಿಗೆ ಕುಡಿಸುವಂತೆ ಸೂಚಿಸಿದ್ದರು. ಆ ಔಷಧಿಯನ್ನು ಸೇವಿಸಿದ ಮಕ್ಕಳಲ್ಲಿ ಹಲವಾರು ಮಕ್ಕಳ ಆರೋಗ್ಯ ಹದಗೆಟ್ಟಿದ್ದು ಆಸ್ಪತ್ರೆಗೆ ದಾಖಲಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಔಷಧಿ ನಿಜಕ್ಕೂ ಸೇಫ್ ಹೌದೋ ಅಲ್ಲವೋ ಎಂಬುದನ್ನು ಟ್ರಯಲ್ ನೋಡಲು ಹೋಗಿದ್ದ ವೈದ್ಯರು ತಾವೇ ಸ್ವತಃ ಆ ಔಷಧಿಯನ್ನು ಕುಡಿದಿದ್ದು ಕೆಲವು ಗಂಟೆಗಳ ನಂತರ ಅವರೂ ಮೂರ್ಛೆ ಹೋಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *