ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ತೀವ್ರ ವಿವಾದ ಸೃಷ್ಟಿಸಿದ್ದ ಕೇರಳದ ಮಲಪ್ಪುರಂನ ‘ಜಿನ್ ಬಾಳೆಹಣ್ಣು’ ವಂಚನೆ ಪ್ರಕರಣ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು, ನಕಲಿ ಆಧ್ಯಾತ್ಮಿಕ ಕೇಂದ್ರಕ್ಕೆ ಬೀಗ ಬಿದ್ದಿದೆ. ಧರ್ಮದ ಹೆಸರಿನಲ್ಲಿ ನಡೆದ ಈ ಬೂಟಾಟಿಕೆಯನ್ನು ಪ್ರಮುಖ ಇಸ್ಲಾಮಿಕ್ ವಿದ್ವಾಂಸರು ಕಟುವಾಗಿ ಖಂಡಿಸಿ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ರೊಚ್ಚಿಗೆದ್ದ ಸ್ಥಳೀಯರು ಕೇಂದ್ರಕ್ಕೆ ಮುತ್ತಿಗೆ ಹಾಕಿ ಬಾಗಿಲು ಮುಚ್ಚಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ತಿರುನಾವಾಯ ಸಮೀಪದ ಕೊಟಕ್ಕಲ್ ಬಂದರ್‌ಕಡವಿನಲ್ಲಿ ‘ಕಾಯಲ್‌ಪಟ್ಟಣಂ ಜಿನ್ ಮಹ್ಳರಾ’ ಎಂಬ ಹೆಸರಿನಲ್ಲಿ ಈ ದಂಧೆ ನಡೆಯುತ್ತಿತ್ತು. ಸಭೆಯ ವೇದಿಕೆಯಲ್ಲಿ ಮುಖ ಮುಚ್ಚಿಕೊಂಡು ಕುಳಿತಿದ್ದ ವ್ಯಕ್ತಿಯನ್ನು ‘ಜಿನ್’ (ಅದೃಶ್ಯ ಶಕ್ತಿ) ಎಂದು ಬಿಂಬಿಸಿ, ಸಾಮಾನ್ಯ ಬಾಳೆಹಣ್ಣೊಂದನ್ನು ಪವಾಡದ ಹೆಸರಿನಲ್ಲಿ ಬರೋಬ್ಬರಿ ₹2,500 ಕ್ಕೆ ಹರಾಜು ಹಾಕಲಾಗಿತ್ತು. ಹರಾಜು ಗೆದ್ದ ವ್ಯಕ್ತಿಗೆ ಹಣ್ಣು ನೀಡಿ ಸಿಪ್ಪೆ ಸುಲಿದಾಗ, ಒಳಗೆ ಮೊದಲೇ ತುಂಡುಗಳಾಗಿ ಕತ್ತರಿಸಲ್ಪಟ್ಟಿದ್ದು ಕಂಡುಬಂದಿತ್ತು. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ಇಸ್ಲಾಮಿಕ್ ವಿದ್ವಾಂಸರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ಇದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಅಪ್ಪಟ ಮೌಢ್ಯ ಮತ್ತು ಜನರನ್ನು ದಾರಿ ತಪ್ಪಿಸುವ ವಂಚನೆ, ಇಂತಹ ನಕಲಿ ಕೇಂದ್ರಗಳನ್ನು ಯಾರೂ ಬೆಂಬಲಿಸಬಾರದು” ಎಂದು ಬಹಿರಂಗವಾಗಿ ಕರೆ ನೀಡಿದರು.
ಇನ್ನೊಂದೆಡೆ, ಸಿಪ್ಪೆಗೆ ಹಾನಿಯಾಗದಂತೆ ಸೂಜಿ ಮತ್ತು ದಾರ ಬಳಸಿ ಬಾಳೆಹಣ್ಣನ್ನು ಒಳಭಾಗದಲ್ಲೇ ಕತ್ತರಿಸುವ ಸಾಮಾನ್ಯ ಮ್ಯಾಜಿಕ್ ಟ್ರಿಕ್ ಇದಾಗಿದೆ ಎಂಬುದು ಜಾಲತಾಣಗಳಲ್ಲಿ ಬಯಲಾಯಿತು. ವಿದ್ವಾಂಸರ ವಿರೋಧ ಮತ್ತು ಮೋಸದ ತಂತ್ರ ಬಯಲಾದ ಬೆನ್ನಲ್ಲೇ ಸ್ಥಳೀಯ ಯುವಕರು ನೇರವಾಗಿ ಕೇಂದ್ರಕ್ಕೆ ನುಗ್ಗಿದರು. ತಾವು ತಂದಿದ್ದ ಮತ್ತೊಂದು ಬಾಳೆಹಣ್ಣನ್ನು ನಕಲಿ ಬಾಬಾನ ಕೈಗಿತ್ತು, “ಸಾಧ್ಯವಿದ್ದರೆ ಈಗ ಎಲ್ಲರ ಎದುರೇ ಕತ್ತರಿಸಿ ತೋರಿಸು” ಎಂದು ಸವಾಲೆಸೆದರು. ಆತ ಉತ್ತರವಿಲ್ಲದೆ ತಬ್ಬಿಬ್ಬಾಗುತ್ತಿದ್ದಂತೆ, ಆಕ್ರೋಶಗೊಂಡ ಜನರು ಕೇಂದ್ರದ ನಾಮಫಲಕಗಳನ್ನು ಕಿತ್ತೆಸೆದು, ಕಟ್ಟಡಕ್ಕೆ ಬೀಗ ಜಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
