ಬಹುನಿರೀಕ್ಷಿತ ‘ಟಾಕ್ಸಿಕ್’ (Toxic: A Fairy Tale for Grown-ups) ಸಿನಿಮಾದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದ ರಾಕಿಭಾಯ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಇದೇ ಮಾರ್ಚ್ ೧೯ ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಾಣಬೇಕಿದ್ದ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಬಿಡುಗಡೆಯನ್ನು ಇದೀಗ ಅಧಿಕೃತವಾಗಿ ಜೂನ್ ೪, ೨೦೨೬ ಕ್ಕೆ ಮುಂದೂಡಲಾಗಿದೆ.

ಕಾರಣವೇನು?
ಮಧ್ಯಪ್ರಾಚ್ಯ (Middle East) ದೇಶಗಳಲ್ಲಿ ಪ್ರಸ್ತುತ ಉದ್ಭವಿಸಿರುವ ಯುದ್ಧದ ಕಾರ್ಮೋಡ ಹಾಗೂ ಉದ್ವಿಗ್ನ ಪರಿಸ್ಥಿತಿಯೇ ಚಿತ್ರತಂಡದ ಈ ದಿಢೀರ್ ನಿರ್ಧಾರಕ್ಕೆ ಪ್ರಮುಖ ಕಾರಣ. ಗಲ್ಫ್ ರಾಷ್ಟ್ರಗಳು ಭಾರತೀಯ ಸಿನಿಮಾಗಳಿಗೆ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಪ್ಯಾನ್-ವರ್ಲ್ಡ್ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ‘ಟಾಕ್ಸಿಕ್’ಗೆ ಅಲ್ಲಿನ ಅನಿಶ್ಚಿತತೆಯಿಂದಾಗಿ ವಿತರಣೆ ಮತ್ತು ಕಲೆಕ್ಷನ್ ಮೇಲೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯ ಹಿತದೃಷ್ಟಿಯಿಂದ ರಿಲೀಸ್ ಡೇಟ್ ಅನ್ನು ಬದಲಾಯಿಸಲಾಗಿದೆ.
ಪ್ರಮೋಷನ್ ಕಾರ್ಯಕ್ರಮಗಳಿಗೂ ಬ್ರೇಕ್!
ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿರುವ ಕಾರಣ, ಪ್ರಮೋಷನಲ್ ಚಟುವಟಿಕೆಗಳಿಗೂ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಮಾರ್ಚ್ ೮ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಅದ್ದೂರಿ ಟ್ರೈಲರ್ ಲಾಂಚ್ ಹಾಗೂ ‘ತಬಾಹಿ’ ಎಂಬ ಚೊಚ್ಚಲ ಹಾಡಿನ ಬಿಡುಗಡೆ ಕಾರ್ಯಕ್ರಮಗಳನ್ನು ಕೂಡ ಸದ್ಯಕ್ಕೆ ತಡೆಹಿಡಿಯಲಾಗಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಮುಂತಾದ ಬೃಹತ್ ತಾರಾಗಣವೇ ಇದೆ. ಹೊಸ ಬಿಡುಗಡೆ ದಿನಾಂಕದಿಂದಾಗಿ ಬಾಲಿವುಡ್‌ನ ‘ಧುರಂಧರ್ ೨’ ಚಿತ್ರದೊಂದಿಗಿನ ಬಾಕ್ಸ್ ಆಫೀಸ್ ಕ್ಲಾಶ್ ಕೂಡ ತಪ್ಪಿದಂತಾಗಿದೆ. ಒಟ್ಟಿನಲ್ಲಿ, ‘ಟಾಕ್ಸಿಕ್’ ಅಬ್ಬರ ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಜೂನ್‌ವರೆಗೆ ಕಾಯಲೇಬೇಕಿದೆ.




