ಸುಳ್ಯ: ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್) ಪಕ್ಷದ ವತಿಯಿಂದ ತಾಲೂಕು ಸಮಿತಿ ಅಧ್ಯಕ್ಷರಾದ ಡಿ. ಎಂ. ಶಾರಿಖ್ ನೇತೃತ್ವದಲ್ಲಿ ಮುಖಂಡರು ಇಂದು (ಏಪ್ರಿಲ್ 10) ಸುಳ್ಯ ತಾಲೂಕು ಆಸ್ಪತ್ರೆ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಕಳೆದ ತಿಂಗಳು ಆಸ್ಪತ್ರೆಯ ಹಳೆಯ ಶವಾಗಾರ ಕಟ್ಟಡವನ್ನು ತೆರವುಗೊಳಿಸುವಂತೆ ಕೆ.ಆರ್.ಎಸ್ ಪಕ್ಷದಿಂದ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಇದರ ಹಿನ್ನೆಲೆಯಲ್ಲಿ ಇದೀಗ ಸರ್ಕಾರಿ ಆಸ್ಪತ್ರೆಗೆ ಕಟ್ಟಡ ತೆರವುಗೊಳಿಸಲು ದೃಢೀಕರಣ ಪತ್ರವನ್ನು ನೀಡಲಾಗಿದೆ. ಈ ಕುರಿತು ಆಡಳಿತ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅವರು ಮುಂದಿನ ಕ್ರಮಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರ್ ಅವರಿಗೆ ಪತ್ರವನ್ನು ಕಳುಹಿಸಿರುವುದಾಗಿ ಮಾಹಿತಿ ನೀಡಿದರು.
ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಚರ್ಚೆ:
ಆಸ್ಪತ್ರೆಯ ಶವಾಗಾರಕ್ಕೆ ನಾಮಫಲಕ ಅಳವಡಿಸದಿರುವುದು, ಶವಾಗಾರದ ಸುತ್ತಮುತ್ತಲಿನ ಅಸ್ವಚ್ಛತೆ, ತುಂಬಿ ತುಳುಕುತ್ತಿರುವ ಎರಡು ತ್ಯಾಜ್ಯ ವಿಲೇವಾರಿ ಗುಂಡಿಗಳನ್ನು ನಗರ ಪಂಚಾಯಿತಿಗೆ ತಿಳಿಸಿ ಸ್ವಚ್ಛಗೊಳಿಸುವ ಬಗ್ಗೆ ಹಾಗೂ ಸಮರ್ಪಕವಲ್ಲದ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಮುಖಂಡರು ಆಡಳಿತಾಧಿಕಾರಿಗಳ ಗಮನ ಸೆಳೆದರು.
ಜೊತೆಗೆ, ಆಸ್ಪತ್ರೆಯ ಮುಂಭಾಗದಲ್ಲಿ ದೊಡ್ಡ ಗಾತ್ರದ ನಾಮಫಲಕ ಅಳವಡಿಕೆ, ರಾತ್ರಿ ವೇಳೆ ನಾಮಫಲಕದ ದೀಪ ಉರಿಯದಿರುವ ಬಗ್ಗೆ, ಉಪಹಾರ ಗೃಹದ ಸ್ಥಿತಿಗತಿ, ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸುವ ಬಗ್ಗೆ ಮತ್ತು ಇತ್ತೀಚೆಗೆ ಆಸ್ಪತ್ರೆಯಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಲಾಯಿತು. ಕಳೆದ ವರ್ಷ ಆಸ್ಪತ್ರೆಯಲ್ಲಿ ನಡೆದ ದೊಡ್ಡಮಟ್ಟದ ಹೋರಾಟದ ಬಗ್ಗೆಯೂ ಈ ವೇಳೆ ಪ್ರಸ್ತಾಪಿಸಲಾಯಿತು. ಆಡಳಿತ ವೈದ್ಯಾಧಿಕಾರಿ ಡಾ. ನವೀನ್ ಅವರು ಈ ಎಲ್ಲಾ ವಿಷಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಇದೇ ವೇಳೆ ಆಸ್ಪತ್ರೆಯ ನಿರ್ವಹಣೆಗೆ ಸಂಬಂಧಿಸಿದ ಪರಿಶೀಲನಾ ಪಟ್ಟಿಯನ್ನು ವೈದ್ಯಾಧಿಕಾರಿಗಳಿಗೆ ನೀಡಿ, ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸಲು ಮನವಿ ಮಾಡಲಾಯಿತು.
ನೇಲ್ಯಮಜಲು ಸೇತುವೆ ಕುಸಿತ – ಅಧಿಕಾರಿಗಳಿಂದ ಮಾಹಿತಿ ಸಂಗ್ರಹ:
ಬಳಿಕ ಪಂಚಾಯತ್ ರಾಜ್ ಇಲಾಖೆಗೆ ಭೇಟಿ ನೀಡಿದ ನಿಯೋಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಭೇಟಿಯಾಗಿ ಬೆಳ್ಳಾರೆ ಸಮೀಪದ ನೇಲ್ಯಮಜಲು ಸೇತುವೆ ಕುಸಿದಿರುವ ಬಗ್ಗೆ ಚರ್ಚಿಸಿತು. 2024ರಲ್ಲೇ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಮೇಲಧಿಕಾರಿಗಳು ಸೂಚಿಸಿದ್ದರೂ, ಕಳೆದ ಎರಡು ವರ್ಷಗಳಿಂದ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಲಾಯಿತು. ಅಲ್ಲದೆ, 2022 ರಿಂದ 2026 ರವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ತಾಲೂಕು ಉಪಾಧ್ಯಕ್ಷರಾದ ಕೃಷ್ಣೆಗೌಡ ಹಾಗೂ ಕಾರ್ಯದರ್ಶಿ ನವೀನ್ ಫೆರಾವೋ ಉಪಸ್ಥಿತರಿದ್ದರು.




