ಸುಳ್ಯ: ಇಲ್ಲಿನ ಸುಳ್ಯ ಫುಟ್ಬಾಲ್ ಕ್ಲಬ್ (SFC) ವತಿಯಿಂದ ಆಯೋಜಿಸಲಾಗಿದ್ದ ಫುಟ್ಬಾಲ್ ಕೋಚಿಂಗ್ ಕ್ಯಾಂಪ್‌ಗೆ ಕ್ರೀಡಾ ಪೋಷಕ ಹಾಗೂ ಪ್ರಮುಖರಾದ ಶರೀಫ್ ಕಂಠಿ ಅವರು ಇತ್ತೀಚೆಗೆ ಭೇಟಿ ನೀಡಿ, ಶಿಬಿರಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು.
ಸುಳ್ಯ ತಾಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಫುಟ್ಬಾಲ್ ಕ್ಲಬ್ ಅನ್ನು ರಚಿಸುವ ಮೂಲಕ ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ, ಸುಳ್ಯದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಆಧುನೀಕರಣಗೊಳಿಸಿದ ಹೆಗ್ಗಳಿಕೆ ಶರೀಫ್ ಕಂಠಿ ಅವರಿಗೆ ಸಲ್ಲುತ್ತದೆ. ತಾಲೂಕಿನಲ್ಲಿ ಫುಟ್ಬಾಲ್ ಕ್ರೀಡೆಗೆ ಭದ್ರ ಬುನಾದಿ ಹಾಕಿದ ಅವರು, ಇಂದು ಎಸ್‌ಎಫ್‌ಸಿ (SFC) ಕ್ಲಬ್‌ನ ಕೋಚಿಂಗ್ ಕ್ಯಾಂಪ್‌ನಲ್ಲಿ ಪಾಲ್ಗೊಂಡಿದ್ದ ಪುಟಾಣಿಗಳು ಹಾಗೂ ಯುವ ಕ್ರೀಡಾಪಟುಗಳನ್ನು ಉದ್ದೇಶಿಸಿ ವಿಶೇಷ ತರಗತಿಯನ್ನು ನಡೆಸಿಕೊಟ್ಟರು.
ಉತ್ತಮ ನಾಗರಿಕರಾಗಲು ಶಿಸ್ತು ಅಗತ್ಯ:
ಮೈದಾನದಲ್ಲಿ ಕ್ರೀಡಾಪಟುಗಳು ತೋರುವ ಶಿಸ್ತು ಕೇವಲ ಪಂದ್ಯವನ್ನು ಗೆಲ್ಲಲು ಮಾತ್ರ ಸೀಮಿತವಾಗಿರಬಾರದು. ಅದು ಜೀವನದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಅತ್ಯಂತ ಅಗತ್ಯ ಎಂದು ಶರೀಫ್ ಕಂಠಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕ್ರೀಡಾ ಮನೋಭಾವ ಮತ್ತು ಶಿಸ್ತಿನ ಮಹತ್ವವನ್ನು ಅವರು ಕ್ರೀಡಾಪಟುಗಳಿಗೆ ಮನವರಿಕೆ ಮಾಡಿಕೊಟ್ಟರು.
ಇದೇ ಸಂದರ್ಭದಲ್ಲಿ ಅವರು ಎಸ್‌ಎಫ್‌ಸಿ ಕ್ಲಬ್ಬಿನ ಮುಖ್ಯಸ್ಥರಿಗೂ, ತರಬೇತುದಾರರಿಗೂ ಹಾಗೂ ಕ್ರೀಡಾ ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಕ್ಲಬ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.

Leave a Reply

Your email address will not be published. Required fields are marked *