ಲಂಡನ್: 22 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಆರ್ಸೆನಲ್ (Arsenal) ಫುಟ್ಬಾಲ್ ಕ್ಲಬ್ ಪ್ರತಿಷ್ಠಿತ ಇಂಗ್ಲಿಷ್ ಪ್ರೀಮಿಯರ್ ಲೀಗ್ (English Premier League) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸಿಟಿ (Manchester City) ಮತ್ತು ಬೋರ್ನ್ಮೌತ್ (Bournemouth) ತಂಡಗಳು 1-1 ಗೋಲುಗಳಿಂದ ಡ್ರಾ ಸಾಧಿಸಿದ ಬೆನ್ನಲ್ಲೇ, ಆರ್ಸೆನಲ್ ತಂಡದ ಪ್ರಶಸ್ತಿ ಖಚಿತವಾಗಿದೆ.

ಮೈಕೆಲ್ ಆರ್ಟೆಟಾ (Mikel Arteta) ಅವರ ಮಾರ್ಗದರ್ಶನದಲ್ಲಿ ಈ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್ಸೆನಲ್, ಪಾಯಿಂಟ್ಸ್ ಟೇಬಲ್ನಲ್ಲಿ ಮ್ಯಾಂಚೆಸ್ಟರ್ ಸಿಟಿಗಿಂತ 4 ಅಂಕಗಳ ಅಜೇಯ ಮುನ್ನಡೆ ಸಾಧಿಸಿ ಈ ಐತಿಹಾಸಿಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
2003-04ನೇ ಸಾಲಿನಲ್ಲಿ ಆರ್ಸೆನ್ ವೆಂಗರ್ (Arsene Wenger) ಅವರ ನೇತೃತ್ವದಲ್ಲಿ “ಇನ್ವಿನ್ಸಿಬಲ್ಸ್” (Invincibles) ಖ್ಯಾತಿಯೊಂದಿಗೆ ಟ್ರೋಫಿ ಗೆದ್ದ ನಂತರ ಆರ್ಸೆನಲ್ ತಂಡ ಒಮ್ಮೆಯೂ ಲೀಗ್ ಗೆದ್ದಿರಲಿಲ್ಲ. ಇದೀಗ 2026ರಲ್ಲಿ ಈ ಮಹತ್ತರ ಸಾಧನೆ ಮಾಡುವ ಮೂಲಕ ತಂಡದ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆಮಾಡಿದೆ. ಈ ಗೆಲುವಿನಲ್ಲಿ ತಂಡದ ಸ್ಟಾರ್ ಆಟಗಾರರಾದ ಡೆಕ್ಲಾನ್ ರೈಸ್ (Declan Rice) ಹಾಗೂ ಬುಕಾಯೊ ಸಾಕಾ (Bukayo Saka) ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.







