ಐಪಿಎಲ್ 2026ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ತಾರೆ, 15 ವರ್ಷದ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರೀಡಾಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಕೇವಲ 26 ಎಸೆತಗಳಲ್ಲಿ 78 ರನ್ ಸಿಡಿಸಿ ರಾಜಸ್ಥಾನ್‌ಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು.
ಈ ಸ್ಮರಣೀಯ ಪಂದ್ಯದ ನಂತರ, ಟೀಂ ಇಂಡಿಯಾದ ದಿಗ್ಗಜ ವಿರಾಟ್ ಕೊಹ್ಲಿ ಅವರು ವೈಭವ್ ಅವರ ಅದ್ಭುತ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದರು. ಅಷ್ಟೇ ಅಲ್ಲದೆ, ವೈಭವ್ ಅವರ ರಾಜಸ್ಥಾನ್ ರಾಯಲ್ಸ್ ಕ್ಯಾಪ್ ಮೇಲೆ “Dear Vaibhav, well done” ಎಂದು ಬರೆದು ತಮ್ಮ ಆಟೋಗ್ರಾಫ್ ನೀಡಿದ್ದರು.
ವಿರಾಟ್ ಕೊಹ್ಲಿಯಂತಹ ಲೆಜೆಂಡ್‌ನಿಂದ ಸಿಕ್ಕ ಈ ವಿಶೇಷ ಉಡುಗೊರೆಯಿಂದ ವೈಭವ್ ಸೂರ್ಯವಂಶಿ ಫುಲ್ ಖುಷ್ ಆಗಿದ್ದಾರೆ. ತಮಗೆ ಸಿಕ್ಕ ಈ ಕ್ಯಾಪ್ ಅನ್ನು ಅವರು ಅತ್ಯಂತ ಹೆಮ್ಮೆಯಿಂದ ಧರಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಪಂದ್ಯಗಳ ನೇರ ಪ್ರಸಾರದ (Live TV) ವೇಳೆಯೂ ವೈಭವ್, ವಿರಾಟ್ ಸಹಿ ಇರುವ ಇದೇ ಕ್ಯಾಪ್ ಧರಿಸಿರುವುದು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಈ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಪ್ರಸ್ತುತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿ ‘ಆರೆಂಜ್ ಕ್ಯಾಪ್’ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರೂ, ತಮ್ಮ ಬಾಲ್ಯದ ಹೀರೋ ವಿರಾಟ್ ಕೊಹ್ಲಿ ನೀಡಿದ ಈ ಕ್ಯಾಪ್ ತಮಗೆ ಅತ್ಯಂತ ಅಮೂಲ್ಯ ಎಂದು ವೈಭವ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಿದ ಕೊಹ್ಲಿಯ ನಡೆ ಹಾಗೂ ಕ್ಯಾಪ್‌ನಿಂದಲೇ ಗಮನ ಸೆಳೆಯುತ್ತಿರುವ ವೈಭವ್ ಅವರ ಬಗ್ಗೆ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.








