ಲಂಡನ್: ಸತತ 20 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಆರ್ಸೆನಲ್ ತಂಡವು ಯುವೇಫಾ ಚಾಂಪಿಯನ್ಸ್ ಲೀಗ್ (UEFA Champions League) ಫೈನಲ್‌ಗೆ ಅದ್ಧೂರಿಯಾಗಿ ಪ್ರವೇಶಿಸಿದೆ. ಎಮಿರೇಟ್ಸ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ನ ರೋಚಕ ಎರಡನೇ ಲೆಗ್ ಪಂದ್ಯದಲ್ಲಿ ಆರ್ಸೆನಲ್ 1-0 ಗೋಲಿನಿಂದ ಅಟ್ಲೆಟಿಕೊ ಮ್ಯಾಡ್ರಿಡ್ ತಂಡವನ್ನು ಮಣಿಸಿ, ಒಟ್ಟಾರೆ 2-1 ಅಂತರದ ಜಯದೊಂದಿಗೆ ಫೈನಲ್ ಟಿಕೆಟ್ ಖಚಿತಪಡಿಸಿಕೊಂಡಿದೆ.
ಪಂದ್ಯದ ಮೊದಲಾರ್ಧದ 44ನೇ ನಿಮಿಷದಲ್ಲಿ ಸ್ಟಾರ್ ಆಟಗಾರ ಬುಕಾಯೊ ಸಾಕಾ (Bukayo Saka) ಬಾರಿಸಿದ ಅದ್ಭುತ ಗೋಲು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಮೈಕೆಲ್ ಆರ್ಟೆಟಾ ಗರಡಿಯಲ್ಲಿ ಪಳಗಿರುವ ಆರ್ಸೆನಲ್, ಈ ಗೆಲುವಿನೊಂದಿಗೆ 2006ರ ನಂತರ ಮೊದಲ ಬಾರಿಗೆ ಚಾಂಪಿಯನ್ಸ್ ಲೀಗ್ ಫೈನಲ್ ಆಡುವ ಅರ್ಹತೆ ಗಿಟ್ಟಿಸಿಕೊಂಡಿದೆ. ಮೇ 30ರಂದು ಬುಡಾಪೆಸ್ಟ್‌ನ ಪುಸ್ಕಾಸ್ ಅರೆನಾದಲ್ಲಿ ನಡೆಯಲಿರುವ ಮಹತ್ವದ ಫೈನಲ್ ಕದನದಲ್ಲಿ ಆರ್ಸೆನಲ್ ತಂಡವು ಪ್ಯಾರಿಸ್ ಸೇಂಟ್-ಜರ್ಮೈನ್ (PSG) ಅಥವಾ ಬೇಯರ್ನ್ ಮ್ಯೂನಿಚ್ (Bayern Munich) ತಂಡವನ್ನು ಎದುರಿಸಲಿದೆ.






