ಚೆನ್ನೈ: ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ (ಏಪ್ರಿಲ್ 14) ನಡೆದ ಐಪಿಎಲ್ 2026ರ 22ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) 32 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಂಘಟಿತ ಪ್ರದರ್ಶನ ನೀಡಿದ ಸಿಎಸ್‌ಕೆ ಗೆಲುವಿನ ನಗೆ ಬೀರಿದರೆ, ಕೆಕೆಆರ್ ತಂಡ ಈ ಆವೃತ್ತಿಯ ಐದನೇ ಸತತ ಸೋಲಿನ ಮುಖಭಂಗ ಅನುಭವಿಸಿದೆ.

ಸ್ಯಾಮ್ಸನ್, ಮ್ಹಾತ್ರೆ ಮಿಂಚಿನ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 32 ಎಸೆತಗಳಲ್ಲಿ 48 ರನ್ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಅವರಿಗೆ ಅತ್ಯುತ್ತಮ ಸಾಥ್ ನೀಡಿದ ಯುವ ಆಟಗಾರ ಆಯುಷ್ ಮ್ಹಾತ್ರೆ ಕೇವಲ 17 ಎಸೆತಗಳಲ್ಲಿ 38 ರನ್ ಚಚ್ಚಿದರು. ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ ಕೂಡ 41 (29 ಎಸೆತ) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಕೋಲ್ಕತ್ತಾ ಪರ ಕಾರ್ತಿಕ್ ತ್ಯಾಗಿ 35 ರನ್ ನೀಡಿ 2 ವಿಕೆಟ್ ಪಡೆದರು.
ಕುಸಿದ ಕೋಲ್ಕತ್ತಾ, ನೂರ್ ಅಹ್ಮದ್ ಸ್ಪಿನ್ ಮೋಡಿ
193 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಮಣ್‌ದೀಪ್ ಸಿಂಗ್ (35) ಮತ್ತು ರೋವ್ಮನ್ ಪೊವೆಲ್ (ಅಜೇಯ 31) ಕೊನೆಯ ಹಂತದಲ್ಲಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 160 ರನ್ ಗಳಿಸಲಷ್ಟೇ ಶಕ್ತವಾಯಿತು.
ಚೆನ್ನೈ ಪರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಸ್ಪಿನ್ನರ್ ನೂರ್ ಅಹ್ಮದ್, 4 ಓವರ್‌ಗಳಲ್ಲಿ ಕೇವಲ 21 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಕೆಕೆಆರ್ ಬೆನ್ನೆಲುಬು ಮುರಿದರು. ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನಕ್ಕಾಗಿ ಅವರು ‘ಪಂದ್ಯ ಶ್ರೇಷ್ಠ’ (Player of the Match) ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್:
- ಚೆನ್ನೈ ಸೂಪರ್ ಕಿಂಗ್ಸ್ (CSK): 20 ಓವರ್‌ಗಳಲ್ಲಿ 192/5 (ಸಂಜು ಸ್ಯಾಮ್ಸನ್ 48, ಡೆವಾಲ್ಡ್ ಬ್ರೆವಿಸ್ 41, ಆಯುಷ್ ಮ್ಹಾತ್ರೆ 38; ಕಾರ್ತಿಕ್ ತ್ಯಾಗಿ 35ಕ್ಕೆ 2)
- ಕೋಲ್ಕತ್ತಾ ನೈಟ್ ರೈಡರ್ಸ್ (KKR): 20 ಓವರ್‌ಗಳಲ್ಲಿ 160/7 (ರಮಣ್‌ದೀಪ್ ಸಿಂಗ್ 35, ರೋವ್ಮನ್ ಪೊವೆಲ್ 31*; ನೂರ್ ಅಹ್ಮದ್ 21ಕ್ಕೆ 3, ಅನ್ಶುಲ್ ಕಾಂಬೋಜ್ 32ಕ್ಕೆ 2)




