
ಸುಳ್ಯದ ಪ್ರತಿಷ್ಠಿತ ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕಿ ಶ್ರೀಮತಿ ರತ್ನಾವತಿ ಡಿ, ಸುಧೀರ್ಘ 34 ವರ್ಷಗಳ ಸೇವೆಯನ್ನು ಸಲ್ಲಿಸಿ ಮೇ 30ರಂದು ಸೇವಾ ನಿವೃತ್ತಿಯನ್ನು ಹೊಂದಿದ್ದು ಕಾಲೇಜಿನ ಶಿಕ್ಷಕ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ರತ್ನಾವತಿಯವರು ದೇವರಗುಂಡ ದಿ. ಅಣ್ಣಕೂಸು ಗೌಡ ಮತ್ತು ದಿ. ಸೀತಮ್ಮ ದಂಪತಿಗಳ ಪುತ್ರಿಯಾಗಿ 21.5.1966 ರಂದು ಜನಿಸಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಅನುದಾನಿತ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಪಂಜಿಕಲ್ಲಿನಲ್ಲಿ, ಪ್ರೌಢಶಿಕ್ಷಣವನ್ನು ಶ್ರೀ ಸೀತಾರಾಘವ ಪದವಿಪೂರ್ವ ಕಾಲೇಜು ಪೆರ್ನಾಜೆಯಲ್ಲಿ ಪೂರೈಸಿದ್ದರು. 1982 ರಿಂದ 1987 ರವರೆಗೆ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಪೂರೈಸಿ ತದನಂತರ ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಕಾಂ ಪದವಿಯನ್ನು ಪಡೆದರು.
ತಮ್ಮ ವೃತ್ತಿಜೀವನವನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮಡಿಕೇರಿ ಹಾಗೂ ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜು ಪೆರ್ನಾಜೆಯಲ್ಲಿ ಆರಂಭಿಸಿ ತದನಂತರ ದಿನಾಂಕ 6.7.1992 ರಂದು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕಿಯಾಗಿ ಆಯ್ಕೆಗೊಂಡರು. 2010ರಿಂದ 2013ರ ತನಕ 3 ವರ್ಷಗಳ ಕಾಲ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಕಾಲೇಜಿನ ವಿವಿಧ ಘಟಕಗಳಾದ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಚಾಲಕರಾಗಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿಯೂ ಕೂಡ ಸೇವೆಯನ್ನು ಸಲ್ಲಿಸಿ ಸಂಸ್ಥೆಯ ಗುಣಮಟ್ಟ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕರಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸಮಿತಿಗಳಾದ ಮುಕ್ತ ಮತ್ತು ಅಮುಕ್ತ ಇದರ ಅಜೀವ ಸದಸ್ಯರಾಗಿದ್ದಾರೆ. ದಿನಾಂಕ 1.7.2020 ರಿಂದ ಇಲ್ಲಿಯ ತನಕ ಕಾಲೇಜಿನ ಆಡಳಿತ ಮಂಡಳಿಯ ಸಿಬ್ಬಂದಿ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಜವಾಬ್ದಾರಿಗಳಾದ ವಾಣಿಜ್ಯ ವಿಭಾಗದ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಮತ್ತು ಕಾಲೇಜಿನ ಮುಖ್ಯ ಪರೀಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಇವರ ಪತಿ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಉದ್ಯೋಗಿಯಾಗಿರುವ ಶಿವರಾಮ ಕೇರ್ಪಳ ಹಾಗೂ ಪುತ್ರಿಯರು ಡಾ. ಮೇಘಶ್ರೀ ಕೆ ಮತ್ತು ಡಾ. ಮಧುಶ್ರೀ ಕೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರದ ಡಾ. ರುದ್ರ ಕುಮಾರ್ ಎಂ.ಎಂ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು, ಐ.ಕ್ಯೂ.ಎ.ಸಿ ಸಂಚಾಲಕಿ ಡಾ. ಮಮತ ಕೆ, ಸ್ಟಾಫ್ ಕ್ಲಬ್ ಕಾರ್ಯದರ್ಶಿ ದಿವ್ಯ ಟಿ.ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಕು. ಅಭಿಜ್ಞ ನಿರ್ವಹಿಸಿದ್ದು ಕಾಲೇಜಿನ ಎಲ್ಲಾ ಭೋದಕ ಮತ್ತು ಭೋದಕೇತರ ವೃಂದದವರು ಸಹಕರಿಸಿದರು.







