ಸುಳ್ಯ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಆದರೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಚುನಾವಣಾ ಪ್ರಚಾರಕರು ಬಾರದಂತೆ ಅಳವಡಿಸಿರುವ ವಿಭಿನ್ನ ಬ್ಯಾನರ್ ಒಂದರ ಫೋಟೋ ಮತ್ತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಗುತ್ತಿಗಾರು ಗ್ರಾಮದ ಕಮಿಲ-ಬಳ್ಪ ರಸ್ತೆ ಬದಿಯಲ್ಲಿ ಈ ಬ್ಯಾನರ್ ಕಂಡುಬಂದಿದ್ದು, ಅದರಲ್ಲಿ “ಎಲೆಕ್ಷನ್ ಮತ್ತು ಕಲೆಕ್ಷನ್ ನವರಿಗೆ ಕಡ್ಡಾಯವಾಗಿ ಒಳಗೆ ಪ್ರವೇಶವಿಲ್ಲ. ಕಚ್ಚುವ ನಾಯಿಗಳಿವೆ ಜಾಗ್ರತೆ!” ಎಂದು ಖಡಕ್ ಎಚ್ಚರಿಕೆ ಬರೆಯಲಾಗಿದೆ. ಜೊತೆಗೆ ಬ್ಯಾನರ್ನಲ್ಲಿ ಶ್ವಾನವೊಂದರ ಚಿತ್ರವನ್ನೂ ಮುದ್ರಿಸಲಾಗಿದೆ.
ಬ್ಯಾನರ್ ಹಾಕಲು ಅಸಲಿ ಕಾರಣವೇನು?
ಗುತ್ತಿಗಾರಿನ ಲಕ್ಷ್ಮಣ ದೇವಶ್ಯ ಎಂಬುವವರು ತಮ್ಮ ಮನೆಯ ಸಮೀಪ ಈ ಬ್ಯಾನರ್ ಅಳವಡಿಸಿದವರು. ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಊರೂರುಗಳಲ್ಲಿ ನೆಲೆಸುತ್ತಿದ್ದು, ಅವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಹಾಗೂ ಜನಪ್ರತಿನಿಧಿಗಳ ಬಳಿ ಹಲವು ಬಾರಿ ಮನವಿ ಮಾಡಿಕೊಂಡಿದ್ದೆ. ಆದರೆ ಅವರಿಂದ ಯಾವುದೇ ಸೂಕ್ತ ಸ್ಪಂದನೆ ದೊರೆಯದ ಕಾರಣ, ಬೇಸತ್ತು ಈ ರೀತಿಯ ಬ್ಯಾನರ್ ಅಳವಡಿಸಿದ್ದೇನೆ” ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ವೈರಲ್:
ರಸ್ತೆ ಬದಿಯಲ್ಲಿ ಅಳವಡಿಸಲಾದ ಈ ವಿಶಿಷ್ಟ ಬ್ಯಾನರ್ ಅನ್ನು ಗುತ್ತಿಗಾರಿನ ನಿರಂತ್ ದೇವಶ್ಯ ಎಂಬುವವರು ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಜನರ ಪರವಾಗಿ ಕೆಲಸ ಮಾಡದ ಜನಪ್ರತಿನಿಧಿಗಳ ವಿರುದ್ಧದ ಈ ಆಕ್ರೋಶಕ್ಕೆ ನೆಟ್ಟಿಗರಿಂದಲೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.




