ಶ್ರಮವು ನಿನ್ನದೇ ಛಲವು ನಿನ್ನದೇ ನಿಮ್ಮ ಪ್ರಯತ್ನ ಪರಿಪೂರ್ಣವಾಗಿದ್ದರೆ ಏನನ್ನೂ ಸಾಧಿಸಬಹುದು: ಚೆನ್ನಮ್ಮ ಪಿ. ಗುತ್ತಿಗಾರು

ಅಲಸ್ಯತನ ಬಿಟ್ಟು ಗುರಿಯೆಡೆಗೆ ದೃಢವಾಗಿ ಸಾಗಿದರೆ ಯಶಸ್ಸು ಸಾಧ್ಯ. ಸಿಕ್ಕ ಎಲ್ಲಾ ಪುಟ್ಟ ಉತ್ತಮ ಅವಕಾಶಗಳನ್ನೂ ಸದುಪಯೋಗಪಡಿಸಿಕೊಳ್ಳಬೇಕು.
ಶ್ರಮವು ನಿನ್ನದೇ ಛಲವು ನಿನ್ನದೇ ನಿಮ್ಮ ಪ್ರಯತ್ನ ಪರಿಪೂರ್ಣವಾಗಿದ್ದರೆ ಏನನ್ನೂ ಸಾಧಿಸಬಹುದು ಎಂದು ಗುತ್ತಿಗಾರು ಸರಕಾರಿ
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚೆನ್ನಮ್ಮ ಪಿ ಹೇಳಿದರು. ಇವರು ಏಪ್ರಿಲ್ 23ರಂದು ಗುರುವಾರ ನಡೆದ ನೆಹರು ಮೆಮೋರಿಯಲ್ ಕಾಲೇಜಿನ ವಾರ್ಷಿಕೋತ್ಸವದ ಮುನ್ನಾದಿನ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡುತ್ತಾ ಹೇಳಿದರು.

ಹಾಗೆಯೇ ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಕೆ.ಎಸ್.ಎಸ್ ಪದವಿ ಕಾಲೇಜು ಸುಬ್ರಹ್ಮಣ್ಯದ ಪ್ರಾಂಶುಪಾಲರಾದ ದಿನೇಶ್ ಪಿ ಟಿ ತನ್ನ ವಿದ್ಯಾಭ್ಯಾಸ ಅವಧಿಯಲ್ಲಿನ ದಿನಗಳನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳಲ್ಲಿ ಸರಳವಾಗಿರಿ, ವಿನಯವಾಗಿರಿ, ವಿದ್ಯೆಯ ಜೊತೆಗೆ ಕೌಶಲ್ಯ ಕಲಿಕೆಯು ಅಗತ್ಯ ಎಂದು ಕಿವಿಮಾತು ಹೇಳಿದರು.

ಸಾಂಪ್ರದಾಯಿಕ ದಿನ ಆಚರಣೆ ಪ್ರಯುಕ್ತ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ ಸಂತಸಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ವಹಿಸಿದ್ದರು. ವೇದಿಕೆಯಲ್ಲಿನ ಗಣ್ಯರಾದ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು, ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ ರೈ, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಶ್ವನಾಥ ಕೆ ಟಿ ಮತ್ತು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶಶ್ಮಿ ಭಟ್ ವಿದ್ಯಾರ್ಥಿಗಳಿಗೆ ಪ್ರೇರಣದಾಯಕ ಮಾತುಗಳನಾಡಿದರು. ಕಾಲೇಜು ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ, ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ ಹಾಗೂ ವಿದ್ಯಾರ್ಥಿ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಶ್ರೀಲಯ ಮತ್ತು ಸ್ವಾತಿಶ್ರೀ ಪ್ರಾರ್ಥಿಸಿ, ವಿದ್ಯಾರ್ಥಿ ಸಂಘದ ಉಪನಾಯಕ ದಿಶಾಂತ್ ಬಿಸಿಎ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸುಜನಾ ರೈ ಬಿ.ಎ ಮತ್ತು ಸಂಸ್ಕೃತಿಕ ಕಾರ್ಯದರ್ಶಿ ಚೈತ್ರಾ ಟಿ ಬಿ.ಎಸ್ಸಿ ಅತಿಥಿಗಳನ್ನು ಪರಿಚಯಿಸಿ, ಕ್ರೀಡಾ ಕಾರ್ಯದರ್ಶಿ ಮುದಾಶಿರ್ ವಂದಿಸಿದರು. ಕೌಶಿಕ್ ಬಿಸಿಎ ಮತ್ತು ಅಖಿಲೇಶ್ ಬಿಬಿಎ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಹಕರಿಸಿದರು.

Leave a Reply

Your email address will not be published. Required fields are marked *