
ವಿದ್ಯೆ, ಕೌಶಲ್ಯ ಮತ್ತು ಪರಿಶ್ರಮದಿಂದ ಯಶಸ್ಸಿನತ್ತ ಪಯಣ. ಪದವಿ ಶಿಕ್ಷಣ ಬದುಕಿಗೆ ಆಭರಣ: ಪ್ರೊ. ಸೋಮಶೇಖರ್ ನಾಯಕ್ ಸುಬ್ರಹ್ಮಣ್ಯ
ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ನಮ್ಮೆಲ್ಲ ವಿದ್ಯಾಸಂಸ್ಥೆಗಳಿಗೆ ಪ್ರೇರಣೆಯೂ ಮಾದರಿಯೂ ಆಗಿದೆ. ವಿದ್ಯೆ ಪ್ರತಿಯೊಬ್ಬ ವ್ಯಕ್ತಿಯನ್ನು ತಲೆ ಎತ್ತಿ ನಿಲ್ಲಿಸುವ ಶಕ್ತಿಯುತ ಸಾಧನವಾಗಿದೆ. ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ; ಅದರ ಜೊತೆಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಂಡು ಪ್ರಬುದ್ಧತೆಯನ್ನು ಹೊಂದುವುದು ಅತ್ಯವಶ್ಯಕ.
ನಾವು ಇಂದು ವಿಜ್ಞಾನವು ನಮ್ಮ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಿರುವ ಅದ್ಭುತ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಪದವಿ ಶಿಕ್ಷಣವು ಭವಿಷ್ಯದಲ್ಲಿ ನ್ಯಾಯಯುತವಾಗಿ ಸಂಪಾದನೆ ಮಾಡಿ ಸಮೃದ್ಧ ಜೀವನ ಕಟ್ಟಿಕೊಳ್ಳುವ ದಾರಿಯನ್ನು ತೆರೆದಿಡುತ್ತದೆ. ಉದಾಹರಣೆಗೆ, ಅವಕಾಶಭರಿತ ಜೀವವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದವರು ಉಪನ್ಯಾಸಕರಾಗಿಯೂ, ಖಾಸಗಿ ವಲಯದಲ್ಲಿಯೂ ಲಕ್ಷಾಂತರ ಸಂಪಾದಿಸುತ್ತಿರುವುದು ಸ್ಪಷ್ಟ ನಿದರ್ಶನವಾಗಿದೆ.
ಆದ್ದರಿಂದ ಶ್ರಮಪಟ್ಟು ಓದಿ, ಜ್ಞಾನವಂತರಾಗಿ. ಗುರಿ ಸಾಧಿಸಿ, ಯೋಗ್ಯ ಸ್ಥಾನಮಾನ ಗಳಿಸಿ, ಸಮಾಜದೊಂದಿಗೆ ಬೆರೆತು ಸಹಕಾರದ ಮನೋಭಾವದಿಂದ ಬದುಕುವುದು ನಮ್ಮ ಕರ್ತವ್ಯವಾಗಬೇಕು. ಪದವಿ ಶಿಕ್ಷಣ ಬದುಕಿಗೆ ಆಭರಣ. ಅದು ವಿದ್ಯಾರ್ಥಿಯ ಜ್ಞಾನವನ್ನು ಮಾತ್ರವಲ್ಲ, ವ್ಯಕ್ತಿತ್ವ, ಗೌರವ ಮತ್ತು ಭವಿಷ್ಯವನ್ನು ರೂಪಿಸುವ ಅಮೂಲ್ಯ ಸಂಪತ್ತು ಎಂದು ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ ಇಲ್ಲಿನ ಪ್ರಾಂಶಪಾಲರಾಗಿರುವ ಸೋಮಶೇಖರ ನಾಯಕ್ ಹೇಳಿದರು. ಇವರು ಏಪ್ರಿಲ್ 24ರಂದು ನೆಹರೂ ಮೆಮೋರಿಯಲ್ ಪದವಿ ಕಾಲೇಜಿನ ವಾರ್ಷಿಕ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಇದರ ಉಪಾಧ್ಯಕ್ಷರಾಗಿರುವ ಶೋಭಾ ಚಿದಾನಂದರವರು ಸಂಸ್ಥೆ ನೀಡುತ್ತಿರುವ ಅತ್ಯುತ್ತಮ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಸಾಧನೆಗಳನ್ನು ಮಾಡಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶಪಾಲರಾದ ಡಾ. ರುದ್ರಕುಮಾರ್ ವಾರ್ಷಿಕ ವರದಿಯನ್ನು ವಾಚಿಸಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ್ ಪೇರಾಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ವಿಶ್ವನಾಥ್ ಕೆ ಟಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ, ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದ ಸಂಜೀವ ಕುತ್ಪಾಜೆ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಹಿರಿಯ ಪ್ರಾದ್ಯಾಪಕಿಯಾಗಿ ನಿವೃತ್ತರಾಗಲಿರುವ ರತ್ನವತಿ ಡಿ, ಡಾಕ್ಟರೇಟ್ ಪದವಿ ಪಡೆದುಕೊಂಡ ಗ್ರಂಥಪಾಲಕರಾದ ಡಾ. ಉಮೇಶ್ ಇವರನ್ನು ಮತ್ತು ಇತ್ತೀಚೆಗೆ ಸತತ 24 ಗಂಟೆಗಳ ಕೂಚಿಪುಡಿ ನೃತ್ಯದ ಮೂಲಕ ಗೋಲ್ಡನ್ ಬುಕ್ ವರ್ಲ್ಡ್ ರೆಕಾರ್ಡ್ ಮಾಡಿದ ಅಭಿಷೇಕ್ ಬಿ.ಎಸ್ಸಿ ಹಾಗೂ ಕ್ರೀಡೆಯಲ್ಲಿ ಕೆವಿಜಿ ಕ್ರೀಡಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಮಂಗಳೂರು ವಿಶ್ವವಿದ್ಯಾನಿಲಯದ ವೈಟ್ ಲಿಫ್ಟಿಂಗ್ ತಂಡವನ್ನು ಪ್ರತಿನಿಧಿಸಿದ್ದ ವಿದ್ಯಾರ್ಥಿ ವಿದ್ಯಾರ್ಥಿ ಅಭಿನಂದನ್ ಹಾಗೂ ಕಬ್ಬಡ್ಡಿಯಲ್ಲಿ ಸಾಧನೆ ಮಾಡಿರುವ ಮನೋಜ್ ಮತ್ತು ಮನು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು, ಕಾಲೇಜಿನ ವಿವಿಧ ಘಟಕಗಳು ಹಾಗೂ ಪತ್ಯೇತರ ವಿಷಯಗಳಲ್ಲಿ ಆಯೋಜಿಸಿದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರತಿ ವಿಭಾಗಗಳಿಂದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ವೈವಿದ್ಯಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯೆ ಡಾ. ಸಾಯಿಗೀತ, ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು ಗಳಾದ ಡಾ. ಪ್ರಭಾಕರ ಶಿಶಿಲ, ಡಾ. ಪೂವಪ್ಪ ಕಣಿಯೂರು, ಕೆವಿಜಿ ಲಾ ಕಾಲೇಜಿನ ಪ್ರಾಂಶುಪಾಲೆ ಟೀನ, ಸೀತಾರಾಮ ಉಳುವಾರು, ವಿದ್ಯಾರ್ಥಿಗಳ ಪೋಷಕರು, ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅಭಿಷೇಕ್ ಹಾಗೂ ಚೈತ್ರಾ ಸ್ವಾಗತ ನೃತ್ಯ ಪ್ರಸ್ತುತಪಡಿಸಿದರು. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕು. ಚಲನ ಟಿ ಬಿ.ಸಿ.ಎ ಸ್ವಾಗತಿಸಿ, ಸದಸ್ಯೆ ಶ್ರೀಲಯ ಬಿ.ಎ ಪ್ರಾರ್ಥಿಸಿ, ಸಹ ಕಾರ್ಯದರ್ಶಿ ಕು. ದೀಕ್ಷಿತಾ ಜಿ ಆಚಾರ್ ಬಿ.ಕಾಂ ಉದ್ಘಾಟಕರನ್ನು ಪರಿಚಯಿಸಿ, ಕ್ರೀಡಾ ಕಾರ್ಯದರ್ಶಿ ಕು.ಜೀಷ್ಮಾ ಬಿ.ಎಸ್ಸಿ ಸಂದೇಶ ವಾಚಿಸಿದರು. ಸದಸ್ಯೆ ಕು. ಮೇಘನಾ ಬಿ.ಕಾಂ ವಂದಿಸಿದರು. ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಸಹಕರಿಸಿದರು.




