
ನಾವು ಅನುಭವಿಸುವ ಪ್ರತಿಯೊಂದು ಸೌಕರ್ಯಕ್ಕೂ ಯಾರೋ ಒಬ್ಬರು ಕಾರ್ಮಿಕರ ಪರಿಶ್ರಮ ಅಡಿಪಾಯವಾಗಿರುತ್ತದೆ: ಡಾ. ನಂದಕುಮಾರ್
ಗೌರವವು ಕೇವಲ ಹುದ್ದೆಯಿಂದ ಅಲ್ಲ ಪರಿಶ್ರಮದಿಂದ ಒದಗುತ್ತದೆ. ನಾವಿಂದು ಪ್ರತಿದಿನ ಮೌನವಾಗಿ ದುಡಿಯುವ ಕೈಗಳಿಗೆ ನಮ್ಮ ಹೃದಯದಿಂದ ಗೌರವ ಸಲ್ಲಿಸುವ ದಿನ. ನಾವು ಅನುಭವಿಸುವ ಪ್ರತಿಯೊಂದು ಸೌಕರ್ಯದಲ್ಲೂ ಯಾರು ಒಬ್ಬರು ಕಾರ್ಮಿಕನ ಪರಿಶ್ರಮ ಅಡಿಪಾಯವಾಗಿರುತ್ತದೆ. ಅವರೆಲ್ಲರಿಗೂ ಕೃತಜ್ಞತೆ ಅರ್ಪಿಸೋಣ. ಕಾರ್ಮಿಕರ ಪರಿಶ್ರಮ ತ್ಯಾಗ ಮತ್ತು ಸಮಾಜ ನಿರ್ಮಾಣದಲ್ಲಿ ಅವರ ಮಹತ್ವದ ಪಾತ್ರವನ್ನು ಗೌರವಿಸೋಣ ಎಂದು ಕೆವಿಜಿ ಮೆಡಿಕಲ್ ಕಾಲೇಜಿನ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದ ವೈದ್ಯಾಧಿಕಾರಿ ಡಾ. ನಂದಕುಮಾರ್ ಬಾಳಿಕಳ ಹೇಳಿದರು. ಇವರು ನೆಹರು ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಎನ್.ಎಂ.ಸಿ ಮತ್ತು ಶ್ರೀ ಕುರುಂಜಿ ಇನ್ಫಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಮೇ 1 ಶುಕ್ರವಾರದಂದು ಹಮ್ಮಿಕೊಂಡ ಕಾರ್ಮಿಕ ದಿನಾಚರಣೆ ಮತ್ತು ಗೌರವ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಹಿರಿಯ ವೈದ್ಯಾಧಿಕಾರಿ ಡಾ. ಸಾಯಿಗೀತಾ ಜ್ಞಾನೇಶ್, ಆರೋಗ್ಯ ಮತ್ತು ನೈರ್ಮಲ್ಯ ವಿಚಾರವಾಗಿ ಮಾತನಾಡಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಸ್ಥರಾಗಿದ್ದರೆ ಮಾತ್ರ ಆರೋಗ್ಯವಂತರು ಎಂದು ಹೇಳಿದರು. ಹಾಗೆಯೇ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕೆವಿಜಿ ಮೆಡಿಕಲ್ ಕಾಲೇಜಿನ ಫೈರ್ ಅಂಡ್ ಸೇಫ್ಟಿ ಅಧಿಕಾರಿ ಮದನ್ ಧರ್ಮಪ್ಪ ಕಾರ್ಮಿಕರ ಮುಂಜಾಗ್ರತೆ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ರಿ. ಸುಳ್ಯದ ಕೆ.ವಿ.ಜಿ ಸಮೂಹ ಸಂಸ್ಥೆಗಳಲ್ಲಿನ ಉದ್ಯೋಗಸ್ತರಾಗಿದ್ದು ತಮ್ಮ ಶ್ರಮ ಸೇವೆಯಿಂದ ಗುರುತಿಸಿಕೊಂಡಿರುವ 28 ಜನ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ರುದ್ರ ಕುಮಾರ್ ಎಂ.ಎಂ. ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರತ್ನಾವತಿ ಡಿ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಹೆಚ್.ಆರ್ ಮ್ಯಾನೇಜರ್ ಶಿವಪ್ರಸಾದ್, ಶ್ರೀ ಕುರುಂಜಿ ಇನ್ಫಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕರಾದ ಸಾಯಿರಾಮ್ ಉಪಸ್ಥಿತರಿದ್ದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ, ಕಾರ್ಯಕ್ರಮ ಸಂಯೋಜಕಿ ಡಾ. ಮಮತಾ ಕೆ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಸ್ಯಶಾಸ್ತ್ರ ಉಪನ್ಯಾಸಕಿ ಕೃತಿಕಾ ಕೆ.ಜೆ ಪ್ರಾರ್ಥಿಸಿ, ಸಮಾಜಶಾಸ್ತ್ರ ಮುಖ್ಯಸ್ಥೆ ಚಿತ್ರಲೇಖ ಕೆ.ಎಸ್ ವಂದಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕಿ ಪ್ರೇಮಲತಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಿಬ್ಬಂದಿಗಳಿಗೆ ವಿವಿಧ ಮನೋರಂಜನ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ವೃಂದದವರು ಸಹಕರಿಸಿ ಕಾರ್ಯಕ್ರಮ ಯಶಸ್ವಿಯಾಯಿತು.






