ವಿಜಯನಗರ: ವಿದೇಶಕ್ಕೆ ಹೋಗಿ ಸುಂದರ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಹೊತ್ತಿದ್ದ ಜಿಲ್ಲೆಯ ಯುವತಿಯೊಬ್ಬಳು ಉಗಾಂಡಾದಲ್ಲಿ ದುರದೃಷ್ಟಕರವಾಗಿ ಜೀವನ ಅಂತ್ಯಗೊಳಿಸಿದ ಘಟನೆ ಸಂಭವಿಸಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನ ಹಟ್ಟಿ ಗ್ರಾಮದ ಬಿಂದು (24) ನಿಧನರಾದ ದುರ್ದೈವಿ. ಕನ್ನನಾಯಕನ ಹಟ್ಟಿಯ ಬಿಂದು ಹಾಗೂ ಅವರ ಪತಿ ಚಂದ್ರಶೇಖರ್ ದಂಪತಿ ಕಳೆದ ಕೆಲವು ಕಾಲದಿಂದ ಪೂರ್ವ ಆಫ್ರಿಕಾದ ಉಗಾಂಡಾದಲ್ಲಿ ನೆಲೆಸಿದ್ದರು. ಆದರೆ, ಬಿಂದು ಅವರು ಆತುರದ ನಿರ್ಧಾರ ಕೈಗೊಂಡು ತಮ್ಮ ಜೀವ ಅಂತ್ಯಗೊಳಿಸಿದ್ದಾರೆ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಇತ್ತ ಅಯ್ಯನಹಳ್ಳಿಯಲ್ಲಿರುವ ಅವರ ಕುಟುಂಬಸ್ಥರು ಮತ್ತು ಸಂಬಂಧಿಕರು ಆಘಾತಕ್ಕೊಳಗಾಗಿದ್ದಾರೆ.

ಶ್ರೀಗಳ ಮಾನವೀಯ ಸ್ಪಂದನೆ:

ವಿದೇಶದಲ್ಲಿ ನಿಧನರಾದ ಬಿಂದು ಅವರ ಪಾರ್ಥಿವ ಶರೀರವನ್ನು ಮರಳಿ ತಾಯ್ನಾಡಿಗೆ ತರುವುದು ಕುಟುಂಬಸ್ಥರಿಗೆ ದೊಡ್ಡ ಸವಾಲಾಗಿತ್ತು. ಈ ಸಂಕಷ್ಟದ ಸಮಯದಲ್ಲಿ ಸಿರಿಗೆರೆಯ ತರಳಬಾಳು ಮಠದ ಶ್ರೀಗಳು ಸಹಾಯ ಹಸ್ತ ಚಾಚಿದ್ದಾರೆ. ಶ್ರೀಗಳು ಕೂಡಲೇ ವಿದೇಶಿ ರಾಯಭಾರಿ ಕಚೇರಿಗಳು ಮತ್ತು ಕೇಂದ್ರ ವಿದೇಶಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಕಾನೂನು ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರೈಸಲು ನೆರವಾಗಿದ್ದಾರೆ.ಶ್ರೀಗಳ ವಿಶೇಷ ಆಸಕ್ತಿಯಿಂದಾಗಿ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಮೃತ ಬಿಂದು ಅವರ ಪಾರ್ಥಿವ ಶರೀರವು ನಾಳೆ (ಗುರುವಾರ) ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದೆ. ನಾಳೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬಿಂದು ಪಾರ್ಥಿವ ಶರೀರವನ್ನು ವಿಜಯನಗರ ಜಿಲ್ಲೆಯ ಅವರ ಸ್ವಗ್ರಾಮ ಕೆ. ಕನ್ನನಾಯಕನ ಹಟ್ಟಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ. ಒಬ್ಬ ಪ್ರತಿಭಾವಂತ ಯುವತಿ ಹೀಗೆ ವಿದೇಶಿ ನೆಲದಲ್ಲಿ ಜೀವನ ಅಂತ್ಯಗೊಳಿಸಿದ್ದು ಗ್ರಾಮಸ್ಥರಲ್ಲಿ ತೀವ್ರ ನೋವುಂಟು ಮಾಡಿದೆ.

ಕೃಪೆ: ಸುವರ್ಣನ್ಯೂಸ್

Leave a Reply

Your email address will not be published. Required fields are marked *