ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕರ್ನಾಟಕ ಸರಕಾರ) ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಬೆಂಗಳೂರು) ಇವರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ’ವು ಶನಿವಾರ (ಮೇ 16) ಅದ್ದೂರಿಯಾಗಿ ಜರುಗಿತು.
ಕಾಸರಗೋಡಿನ ಕುಡಾಲ್ ಮರ್ಕೆಲ, ಸುಬ್ಬಯ್ಯ ಕಟ್ಟೆಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಆಯೋಜನೆಗೊಂಡಿದ್ದ ಈ ಬೃಹತ್ ಕಾರ್ಯಕ್ರಮವು ನಾಡಿನ ಹಲವು ಗಣ್ಯರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನೆರವೇರಿತು.

ದ್ವೇಷ ಭಾಷಣ, ಕೋಮು ಪ್ರಚೋದನೆಗೆ ಆಸ್ಪದ ಬೇಡ – ಮಾಧ್ಯಮಗಳಿಗೆ ಟಿ.ಎಂ ಶಾಹಿದ್  ತೆಕ್ಕಿಲ್ ಕರೆ

ಸಮಾಜದಲ್ಲಿ ಶಾಂತಿ ಮತ್ತು ಸ್ವಾಸ್ಥ್ಯ ಕಾಪಾಡುವುದು ಮಾಧ್ಯಮಗಳ ಬಹುದೊಡ್ಡ ಜವಾಬ್ದಾರಿಯಾಗಿದೆ. ಯಾವುದೇ ಓರ್ವ ವ್ಯಕ್ತಿ ಮಾಡುವ ತಪ್ಪು ಅಥವಾ ಅಪರಾಧಕ್ಕೆ ಆತನ ಧರ್ಮವನ್ನು ತಳುಕು ಹಾಕುವುದು ಅಥವಾ ಇಡೀ ಧಾರ್ಮಿಕ ಸಮುದಾಯವನ್ನು ದೂಷಿಸುವ ಕೆಲಸವನ್ನು ಮಾಧ್ಯಮಗಳು ಎಂದಿಗೂ ಮಾಡಬಾರದು. ಆದ್ದರಿಂದ, ಯಾವುದೇ ಕಾರಣಕ್ಕೂ ದ್ವೇಷ ಭಾಷಣ (Hate Speech) ಹಾಗೂ ಕೋಮು ಭಾವನೆಗಳನ್ನು ಪ್ರಚೋದಿಸುವ (Communal) ವಿಚಾರಗಳಿಗೆ ವೇದಿಕೆ ಒದಗಿಸಬಾರದು ಮತ್ತು ಅಂತಹ ಸುದ್ದಿಗಳನ್ನು ಹರಡಬಾರದು. ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸುವ ನಿಟ್ಟಿನಲ್ಲಿ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು” ಎಂದು ಎಲ್ಲಾ ಪತ್ರಿಕಾ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು


ದಿನವಿಡೀ ನಡೆದ ಈ ಉತ್ಸವದಲ್ಲಿ ವರ್ಣರಂಜಿತ ಶೋಭಾಯಾತ್ರೆ, ದತ್ತಿ ನಿಧಿ ಪ್ರಶಸ್ತಿ ಪ್ರದಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪತ್ರಕರ್ತರಿಗೆ ಗುರುತಿನ ಚೀಟಿ ವಿತರಣೆ, ನೂತನ ಪುಸ್ತಕ ಬಿಡುಗಡೆ ಹಾಗೂ ಕಣ್ಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂಚಾಯತ್ ಸದಸ್ಯ ಸೋಮಶೇಖರ್ ಎರ್ಮಕಜೆ ವಹಿಸಿದರು.
ಉದ್ಘಾಟನೆಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ‌ಮೆ ನೆರವೇರಿಸಿದರು. ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ. ಶಾಹೀದ್ ತೆಕ್ಕಿಲ್ ಪ್ರಶಸ್ತಿ ಪ್ರದಾ‌ನ‌ ಮಾಡಿದರು. ಗಣ್ಯರಾದ ಡಾ. ಕುರುಂ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಕೆ.ಕೆ. ಶೆಟ್ಟಿ ಪುತ್ತೂರು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಸೋಮಶೇಖರ ಜಿ.ಎಸ್., ಪ್ರಧಾನ ಸಂಚಾಲಕರಾದ ಅಶೋಕ ಭಂಡಾರಿ ಕುಡಾಲು, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರವಿ ನಾಯ್ಕಾಪು, ಕೆಯುಡಬ್ಲ್ಯೂಜೆ ಕಾಸರಗೋಡು ಅಧ್ಯಕ್ಷರಾದ ಎ.ಆರ್. ಸುಬ್ರಹ್ಮಣ್ಯಕಟ್ಟೆ ಸೇರಿದಂತೆ ಹಲವು ಪ್ರಮುಖರ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಯಿತು. ಅಪಾರ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.

Leave a Reply

Your email address will not be published. Required fields are marked *