ವ್ಯವಸ್ಥೆಯ ಕ್ರೂರತೆ ಮತ್ತು ಬಡತನದ ಮುಗ್ಧತೆಗೆ ಕನ್ನಡಿ ಹಿಡಿಯುವಂತಹ ಕರುಣಾಜನಕ ಘಟನೆಯೊಂದು ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ನಡೆದಿದೆ. ಇದು ಕೇವಲ ಸುದ್ದಿಯಲ್ಲ, ಅನಕ್ಷರತೆ ಮತ್ತು ಬಡತನ ನಮ್ಮ ಸಮಾಜದಲ್ಲಿ ಎಷ್ಟೊಂದು ಆಳವಾಗಿ ಬೇರೂರಿದೆ ಎಂಬುದರ ಹೃದಯವಿದ್ರಾವಕ ನಿದರ್ಶನ.
ತನ್ನ ಅಕ್ಕ ಕಲ್ರಾ ಮುಂಡಾ ಎಂದರೆ ಜಿತು ಮುಂಡಾನಿಗೆ ಎಲ್ಲಿಲ್ಲದ ಪ್ರೀತಿ. ಆದರೆ ವಿಧಿಯಾಟ, ಆಕೆ ಜಗತ್ತಿಗೆ ವಿದಾಯ ಹೇಳಿದಳು. ಕೂಲಿ ಮಾಡಿ ಬದುಕುತ್ತಿದ್ದ ಆ ಮುಗ್ಧ ಜೀವಕ್ಕೆ, ಅಕ್ಕನ ಬ್ಯಾಂಕ್ ಖಾತೆಯಲ್ಲಿದ್ದ ಕೇವಲ 20,000 ರೂಪಾಯಿಗಳೇ ಮುಂದಿನ ಜೀವನಕ್ಕೆ ಆಸರೆಯಾಗಿತ್ತು. ಆ ಹಣ ಪಡೆಯಲು ಒಡಿಶಾ ಗ್ರಾಮೀಣ ಬ್ಯಾಂಕ್ಗೆ ಆತ ಹಲವು ಬಾರಿ ಅಲೆದಾಡಿದ. ಆದರೆ, ಅಲ್ಲಿನ ಕಾಗದ ಪತ್ರಗಳ ನಿಯಮ, ವಾರಸುದಾರರ ಹಾಗೂ ಮರಣ ಪ್ರಮಾಣಪತ್ರದಂತಹ ವಿಚಾರಗಳು ಆತನಿಗೆ ಅರ್ಥವಾಗಲಿಲ್ಲ.
’ಖಾತೆದಾರರು ಬಂದರೆ ಮಾತ್ರ ಹಣ ಕೊಡುತ್ತೇವೆ’ ಎಂದು ಸಿಬ್ಬಂದಿ ಹೇಳಿದ ಮಾತನ್ನು ಆತ ಅಕ್ಷರಶಃ ನಂಬಿದ್ದ. ಬ್ಯಾಂಕ್ ಅಧಿಕಾರಿಗಳ ಬೇಡಿಕೆ ಪೂರೈಸಲು ಬೇರೆ ದಾರಿ ಕಾಣದ ಆ ಹತಾಶ ಹಾಗೂ ಮುಗ್ಧ ಸಹೋದರ, ಕಣ್ಣೀರು ಹಾಕುತ್ತಲೇ ತನ್ನ ಅಕ್ಕನ ಸಮಾಧಿ ಅಗೆದಿದ್ದಾನೆ. ಆಕೆಯ ಅಸ್ಥಿಪಂಜರವನ್ನು ಚೀಲದಲ್ಲಿ ತುಂಬಿಕೊಂಡು ಸಾಕ್ಷಿಯಾಗಿ ಬ್ಯಾಂಕ್ಗೆ ಹೊತ್ತು ತಂದಿದ್ದಾನೆ! “ನನ್ನ ಅಕ್ಕನನ್ನು ತಂದಿದ್ದೇನೆ, ಈಗಲಾದರೂ ಅವಳ ಹಣ ಕೊಡಿ” ಎಂಬಂತೆ ನಿಂತಿದ್ದ ಆತನನ್ನು ನೋಡಿ ಇಡೀ ಬ್ಯಾಂಕ್ ಬೆಚ್ಚಿಬಿದ್ದಿತ್ತು.
ಇದು ಕೇವಲ ಒಂದು ಅಸ್ಥಿಪಂಜರದ ಕಥೆಯಲ್ಲ; ವ್ಯವಸ್ಥೆಯ ಮುಂದೆ ಸೋತು ಹೋದ, ನಿಯಮಗಳ ಬಗ್ಗೆ ಅರಿವಿಲ್ಲದ ಒಬ್ಬ ಮುಗ್ಧ ಸಹೋದರನ ಕರುಳು ಹಿಂಡುವ ವೇದನೆ. ಅಂತಿಮವಾಗಿ ಅಧಿಕಾರಿಗಳು ಹಾಗೂ ಪೊಲೀಸರು ಆತನಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿ, ಅಸ್ಥಿಪಂಜರವನ್ನು ಗೌರವಯುತವಾಗಿ ಮತ್ತೆ ಮಣ್ಣು ಮಾಡುವಂತೆ ಮಾಡಿದರು. ಆದರೆ, ಆತನ ಆ ಕಣ್ಣೀರು ಮತ್ತು ಬಡತನದ ನೋವು ಮಾತ್ರ ನೋಡಿದವರ ಮನಸ್ಸಿನಲ್ಲಿ ಅಳಿಸಲಾರದ ಕಲೆ ಮೂಡಿಸಿದೆ.






