ಪುತ್ತೂರು: ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ 15 ವರ್ಷದ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಪುತ್ತೂರಿನ ಗಡಿಯಾರ ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಮೃತ ಬಾಲಕನನ್ನು ನೇರಳಕಟ್ಟೆ ಸಮೀಪದ ಕೋಡಾಜೆ ನಿವಾಸಿ ಶಹೀರ್ (15) ಎಂದು ಗುರುತಿಸಲಾಗಿದೆ. ಈತ ನೇರಳಕಟ್ಟೆ ಸಮೀಪದ ಗಣೇಶನಗರದ ಫ್ಲಾಟ್ನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶರೀಫ್ ಅವರ ಪುತ್ರ.
ಶಾಲಾ ರಜೆಯ ಹಿನ್ನೆಲೆಯಲ್ಲಿ ಶಹೀರ್, ಗಡಿಯಾರದಲ್ಲಿರುವ ತನ್ನ ಅಜ್ಜನ ಮನೆಗೆ ತೆರಳಿದ್ದನು. ಅಲ್ಲಿ ಆಟೋ ರಿಕ್ಷಾ ಚಾಲಕ ಹಾಗೂ ಸಮಾಜಸೇವಕ ಪುತ್ತಾಕ ಅವರೊಂದಿಗೆ ಇದ್ದಾಗ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಶಹೀರ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಶಹೀರ್ ಪುತ್ತೂರಿನ ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಬಾಲಕನು ತನ್ನ ತಂದೆ, ತಾಯಿ, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.







