
ಗೂನಡ್ಕ (ಸಂಪಾಜೆ): ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಪೇರಡ್ಕ ಗೂನಡ್ಕದಲ್ಲಿರುವ ದರ್ಗಾ ಶರೀಫ್ನಲ್ಲಿ ನೂತನ ಸರಕಾರಕ್ಕೆ ಶುಭಕೋರಿ ವಿಶೇಷ ಪ್ರಾರ್ಥನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸ್ಥಳೀಯ ಖತೀಬರಾದ ಅಹ್ಮದ್ ನಈಂ ಫೈಝಿ ಅವರ ನೇತೃತ್ವದಲ್ಲಿ ಈ ಪ್ರಾರ್ಥನೆ ನೆರವೇರಿತು. ನೂತನ ಸರಕಾರವು ರಾಜ್ಯದ ಜನತೆಗೆ ಶಾಂತಿಯುತ ಹಾಗೂ ಸುಭದ್ರ ಆಡಳಿತವನ್ನು ನೀಡಲಿ ಎಂದು ಈ ಸಂದರ್ಭದಲ್ಲಿ ಹಾರೈಸಲಾಯಿತು. ಇದೇ ವೇಳೆ, ಜಮಾಅತ್ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರೂ ಆಗಿರುವ ಟಿ.ಎಂ. ಶಾಹೀದ್ ತೆಕ್ಕಿಲ್ ಅವರ ಮುಂದಿನ ರಾಜಕೀಯ ಉನ್ನತಿಗಾಗಿಯೂ ವಿಶೇಷವಾಗಿ ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಪಾಜೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ ಅವರು ನೂತನ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಶುಭ ಹಾರೈಸಿದರು. ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ. ಹನೀಫ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಮಾಅತ್ ಉಪಾಧ್ಯಕ್ಷ ಹನೀಫ್ ಟಿ.ಬಿ., ಕಾರ್ಯದರ್ಶಿ ಉಸ್ಮಾನ್ ಕೆ.ಎಂ., ಸಿನಾನ್ ಗೂನಡ್ಕ, ಹಾರಿಸ್ ಅಝ್ಹರಿ, ಶಾಕಿರ್ ಮುಸ್ಲಿಯಾರ್, ಎಸ್ಕೆಎಸ್ಎಸ್ಎಫ್ ಗೂನಡ್ಕ ಶಾಖೆಯ ಅಧ್ಯಕ್ಷ ಮುನೀರ್ ದಾರಿಮಿ, ಉಪಾಧ್ಯಕ್ಷ ಸಾದುಮಾನ್ ತೆಕ್ಕಿಲ್, ಇಬ್ರಾಹಿಂ ನಡಿಬೈಲ್ ಸೇರಿದಂತೆ ಹಲವು ಗಣ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.








