ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಇಲ್ಲಿ 2026 -27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ಮಹಮ್ಮದ್ ನಜೀರ್ ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಹೊಸದಾಗಿ ಶಾಲೆಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಹೂಗುಚ್ಚ ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಬ್ಯಾಂಡ್ ವಾದ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಕರೆತಂದು ಸಭಾ ಕಾರ್ಯಕ್ರಮಕ್ಕೆ ಅಣಿ ಗೊಳಿಸಲಾಯಿತು
. ಕುಮಾರಿ ಧೃತಿ ಅವರ ದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮಕ್ಕೆ ಕುಮಾರಿ ರಮ್ಯಶ್ರೀ ಸಹ ಶಿಕ್ಷಕಿ ಇವರು ಸರ್ವರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಗೌರವಾನ್ವಿತ ಅತಿಥಿಗಳು ಹಾಗೂ ಗಣ್ಯರು ದೀಪ ಪ್ರಜ್ವಲನ ಮಾಡಿ ಆ ದೀಪದಂತೆ ವಿದ್ಯಾರ್ಥಿಗಳ ಭವಿಷ್ಯ ಸದಾ ಬೆಳಗಲಿ ಎಂದು ಶುಭ ಹಾರೈಸಿದರು.
ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಪೂರ್ಣಿಮಾ M.R ರವರು ಪ್ರಾಸ್ತಾವಿಕ ನುಡಿಗಳ ಮೂಲಕ ಹೊಸ ಶೈಕ್ಷಣಿಕ ವರ್ಷದಲ್ಲಿ ನಡೆಯಲಿರುವ ವಿಶೇಷ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶುಭ ಹಾರೈಸಿದರು.ಆರೋಗ್ಯ ಇಲಾಖೆಯಿಂದ ಆಗಮಿಸಿರುವಂತಹ ಕಮ್ಯುನಿಟಿ ಹೆಲ್ತ್ ಆಫೀಸರ್ ಆಗಿರುವ ಶ್ರೀಮತಿ ತೇಜಶ್ರೀ ರವರು ವಿದ್ಯಾರ್ಥಿಗಳಿಗೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿ ನೀಡಿದರು. ಅಲ್ಲದೆ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವ ಸಂದರ್ಭದಲ್ಲಿ ಆರೋಗ್ಯದ ಕಡೆ ಪೋಷಕರು ವಹಿಸಬೇಕಾದ ಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಬಳಿಕ ಸರ್ಕಾರದಿಂದ ಒದಗಿಸಲಾದ ಉಚಿತ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಇಂದಿರಾ ಮಂಚಿ ಇವರು ತನ್ನ ಹುಟ್ಟು ಹಬ್ಬದ ಪ್ರಯುಕ್ತ ಪೋಷಕರ ಆರ್ಥಿಕ ಸ್ಥಿತಿ ಹಿಂದುಳಿದಿರುವ 5 ವಿದ್ಯಾರ್ಥಿಗಳನ್ನು ಗುರುತಿಸಿ ಬರೆಯುವ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು . ಅದೇ ಸಂದರ್ಭದಲ್ಲಿ ಒಂದನೇ ತರಗತಿಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಶ್ರೀಮತಿ ಪೂರ್ಣಿಮಾ ಎಂ ಆರ್ ಇವರು ನೋಟ್ ಪುಸ್ತಕಗಳನ್ನು ಹಾಗೂ ಲೇಖನ ಸಾಮಗ್ರಿಗಳನ್ನು ಒದಗಿಸಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಯುತ ಮಹಮ್ಮದ್ ನಝೀರ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸಿ, ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಕೊನೆಯಲ್ಲಿ ಶ್ರೀಮತಿ ಭಾಗ್ಯಶ್ರೀ ಎಸ್ ಎನ್ ರವರು ಆಗಮಿಸಿದ, ಸಹಕರಿಸಿದ ಸರ್ವರಿಗೂ ಧನ್ಯವಾದ ಇತ್ತರು . ಆ ಬಳಿಕ ಸಿಹಿಯೂಟ ದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಪೋಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

Leave a Reply

Your email address will not be published. Required fields are marked *