ಹೈದರಾಬಾದ್: ಐಪಿಎಲ್ 2026 ರ 49ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು 33 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

​ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡರು. ಆದರೆ, ಅವರ ಈ ಲೆಕ್ಕಾಚಾರವನ್ನು ಹೈದರಾಬಾದ್ ಬ್ಯಾಟರ್‌ಗಳು ತಲೆಕೆಳಗಾಗಿಸಿದರು. ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 235 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

​ಹೈದರಾಬಾದ್ ಪರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಹೈನ್‌ರಿಚ್ ಕ್ಲಾಸೆನ್ ಕೇವಲ 43 ಎಸೆತಗಳಲ್ಲಿ 69 ರನ್ ಚಚ್ಚಿದರೆ, ಇಶಾನ್ ಕಿಶನ್ 32 ಎಸೆತಗಳಲ್ಲಿ 55 ರನ್ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಟ್ರಾವಿಸ್ ಹೆಡ್ (38 ರನ್, 19 ಎಸೆತ) ಹಾಗೂ ಅಭಿಷೇಕ್ ಶರ್ಮಾ (35 ರನ್, 13 ಎಸೆತ) ತಂಡದ ಮೊತ್ತವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದರು. ಪಂಜಾಬ್ ತಂಡದ ಕಳಪೆ ಫೀಲ್ಡಿಂಗ್ ಕೂಡ ಹೈದರಾಬಾದ್ ತಂಡಕ್ಕೆ ವರದಾನವಾಯಿತು.

​236 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಪರ ಏಕಾಂಗಿ ಹೋರಾಟ ನಡೆಸಿದ ಕೂಪರ್ ಕೊನ್ನೋಲಿ ಕೇವಲ 59 ಎಸೆತಗಳಲ್ಲಿ 107 ರನ್ ಗಳಿಸಿ ಅಜೇಯ ಚೊಚ್ಚಲ ಟಿ20 ಶತಕ ಸಿಡಿಸಿದರಾದರೂ, ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗದ ಕಾರಣ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಹೈದರಾಬಾದ್ ಪರ ಬಿಗಿಯಾದ ಬೌಲಿಂಗ್ ದಾಳಿ ಸಂಘಟಿಸಿದ ಪ್ಯಾಟ್ ಕಮಿನ್ಸ್ 4 ಓವರ್‌ಗಳಲ್ಲಿ 34 ರನ್ ನೀಡಿ 2 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *