ಕೊಡಗು: ಪ್ರಸಿದ್ಧ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಟೆಕ್ಕಿ ಶರಣ್ಯ (36) ಅವರು ಕೊನೆಗೂ ಪತ್ತೆಯಾಗಿದ್ದಾರೆ. ಸತತ ನಾಲ್ಕು ದಿನಗಳ ಕಾರ್ಯಾಚರಣೆಯ ಬಳಿಕ ಇಂದು ಸಂಜೆ ಅವರು ಪತ್ತೆಯಾಗಿದ್ದು, ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.

​ಗುರುವಾರ ಬೆಳಗ್ಗೆ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಿದ್ದ ವೇಳೆ ಶರಣ್ಯ ಅವರು ನಾಪತ್ತೆಯಾಗಿದ್ದರು. ಇವರ ಪತ್ತೆಗಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಸ್ಥಳೀಯ ಗ್ರಾಮಸ್ಥರು ಹಾಗೂ ನಕ್ಸಲ್ ನಿಗ್ರಹ ಪಡೆ (ANF) ಸಿಬ್ಬಂದಿ ಹಗಲಿರುಳು ನಿರಂತರ ಶೋಧ ಕಾರ್ಯ ನಡೆಸುತ್ತಿದ್ದರು. ಇಂದು ಸಂಜೆ ಸ್ಥಳೀಯ ‘ಕುಡಿಯ’ ಸಮುದಾಯದವರು ನಡೆಸಿದ ವಿಶೇಷ ಶೋಧ ಕಾರ್ಯದ ಸಂದರ್ಭದಲ್ಲಿ ಶರಣ್ಯ ಅವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ಮತ್ತು ಅಭಿನಂದನೆ:

ನಾಪತ್ತೆಯಾಗಿದ್ದ ಟೆಕ್ಕಿ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಶರಣ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

​ಬಳಿಕ ಮಾತನಾಡಿದ ಶಾಸಕರು, ಶರಣ್ಯ ಪತ್ತೆಗಾಗಿ ಕಳೆದ 4 ದಿನಗಳಿಂದ ಅವಿರತವಾಗಿ ಶ್ರಮಿಸಿದ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಗ್ರಾಮಸ್ಥರಿಗೆ ವಿಶೇಷ ಧನ್ಯವಾದ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು. ಅಲ್ಲದೆ, ಈ ಕಾರ್ಯಾಚರಣೆಗೆ ಅಗತ್ಯವಿದ್ದ ಅತ್ಯಾಧುನಿಕ ಉಪಕರಣಗಳನ್ನು ಸಕಾಲದಲ್ಲಿ ಒದಗಿಸಿದ ರಾಜ್ಯ ಸರ್ಕಾರಕ್ಕೂ ಅವರು ಕೃತಜ್ಞತೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *