ಅಜ್ಮಾನ್: ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಯುಎಇಯ ಅಜ್ಮಾನ್‌ನಲ್ಲಿರುವ ತುಂಬೆ ಗ್ರೂಪ್‌ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

​ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕದ ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ, ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿ ರಾಜ್ಯ ಹಾಗೂ ಸಮುದಾಯಕ್ಕೆ ಕೀರ್ತಿ ತಂದ ಡಾ. ತುಂಬೆ ಮೊಯ್ದೀನ್ ಅವರ ಸಾಧನೆಯನ್ನು ಇದೇ ವೇಳೆ ಶಾಹಿದ್ ತೆಕ್ಕಿಲ್ ಅವರು ಶ್ಲಾಘಿಸಿ ಅಭಿನಂದಿಸಿದರು.

​ಡಾ. ಮೊಯ್ದೀನ್ ಅವರ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅವರ ಸುಪುತ್ರರಾದ ಯುವ ಉದ್ಯಮಿಗಳಾದ ಅಕ್ಬರ್ ಮತ್ತು ಅಕ್ರಮ್ ಅವರ ಕಾರ್ಯವೈಖರಿ ರಾಜ್ಯದ ಯುವಕರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು. 1998ರಲ್ಲಿ ಅಜ್ಮಾನ್‌ನಲ್ಲಿ ಸ್ಥಾಪನೆಯಾದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU) ಇಂದು 5,000 ವಿದ್ಯಾರ್ಥಿಗಳು ಹಾಗೂ 3,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಆರೋಗ್ಯ ಕ್ಷೇತ್ರದಲ್ಲಿ ತುಂಬೆ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಡಯಗ್ನೋಸ್ಟಿಕ್ ಲ್ಯಾಬ್‌ಗಳು ಮತ್ತು ಫಾರ್ಮಸಿಗಳ ಮೂಲಕ ಲಕ್ಷಾಂತರ ರೋಗಿಗಳಿಗೆ ಸೇವೆ ನೀಡಲಾಗುತ್ತಿದೆ. ಅಜ್ಮಾನ್ ಬೆಳವಣಿಗೆಯಲ್ಲಿ ತುಂಬೆ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದರು.

​ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೋಯ ಅಬ್ದುಲ್ಲ ಕುನ್ಹಿ ಹಾಗೂ ತುಂಬೆ ಮೊಯ್ದೀನ್ ಅವರ ಸೇವೆ ಸಮುದಾಯಕ್ಕೆ ಹೆಮ್ಮೆ ತಂದಿದೆ ಎಂದು ತಿಳಿಸಿದ ಶಾಹಿದ್ ತೆಕ್ಕಿಲ್ ಅವರು, ಬಳಿಕ ಅಲ್ಲಿ ದುಡಿಯುತ್ತಿರುವ ಕರ್ನಾಟಕದ ಕಾರ್ಮಿಕರನ್ನು ಭೇಟಿಯಾಗಿ ಅವರ ಸಮಸ್ಯೆಗಳು ಮತ್ತು ಯೋಗಕ್ಷೇಮವನ್ನು ವಿಚಾರಿಸಿದರು.

​ಈ ಸಂದರ್ಭದಲ್ಲಿ ದುಬೈ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಕೆ. ರಫೀಕ್ ಮಟ್ಟನ್ನೂರ್, ರಿಫಾಯಿ ಪಟೇಲ್ ಗೂನಡ್ಕ, ತುಂಬೆ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿರುವ ಎನ್‌ಎಸ್‌ಯುಐ ನಾಯಕ ಉಬೈಸ್ ಗೂನಡ್ಕ ಹಾಗೂ ತುಂಬೆ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಫಾರೂಕ್ ಬಿಳಿಯಾರು ಉಪಸ್ಥಿತರಿದ್ದು, ಕಾರ್ಮಿಕರ ಕುರಿತು ಮಾಹಿತಿ ನೀಡಿ ಚರ್ಚಿಸಿದರು

Leave a Reply

Your email address will not be published. Required fields are marked *