ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿದೆ. ಈ ಬೃಹತ್ ರನ್ ಚೇಸ್ ಇತಿಹಾಸದ ನಾಲ್ಕನೇ ಯಶಸ್ವಿ ಚೇಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

​ಮುಂಬೈ ಪರ ಬ್ಯಾಟಿಂಗ್ ಅಬ್ಬರ ಜೋರಾಗಿತ್ತು. ರಯಾನ್ ರಿಕೆಲ್ಟನ್ ಕೇವಲ 55 ಎಸೆತಗಳಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ ಅಜೇಯ 123 ರನ್ ಚಚ್ಚಿದರು. ವಿಲ್ ಜಾಕ್ಸ್ ಕೂಡ 46 ರನ್‌ಗಳ ಕೊಡುಗೆ ನೀಡಿದರು. ಇದರಿಂದ ಮುಂಬೈ 20 ಓವರ್‌ಗಳಲ್ಲಿ 243 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

​244 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಹೈದರಾಬಾದ್, ಬ್ಯಾಟರ್‌ಗಳ ಸಿಡಿಲಬ್ಬರದ ಆಟಕ್ಕೆ ಸಾಕ್ಷಿಯಾಯಿತು. ಟ್ರಾವಿಸ್ ಹೆಡ್ ಕೇವಲ 30 ಎಸೆತಗಳಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ ಸ್ಫೋಟಕ 76 ರನ್ ಗಳಿಸಿದರು. ಅಭಿಷೇಕ್ ಶರ್ಮಾ (45 ರನ್) ಬಿರುಸಿನ ಆರಂಭ ಒದಗಿಸಿದರು. ನಂತರ ಬಂದ ಹೆನ್ರಿಕ್ ಕ್ಲಾಸೆನ್ ಕೇವಲ 30 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ ಅಜೇಯ 65 ರನ್ ಸಿಡಿಸಿ ಪಂದ್ಯ ಮುಗಿಸಿದರು.

​ಅಂತಿಮವಾಗಿ ಹೈದರಾಬಾದ್ 18.4 ಓವರ್‌ಗಳಲ್ಲಿ 249 ರನ್ ಗಳಿಸಿ ಚಾರಿತ್ರಿಕ ಜಯ ಗಳಿಸಿತು. ಈ ಗೆಲುವಿನೊಂದಿಗೆ ಹೈದರಾಬಾದ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ, ಮುಂಬೈ 9ನೇ ಸ್ಥಾನದಲ್ಲಿದೆ. ಕ್ಲಾಸೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *