ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ಗಳ ಐತಿಹಾಸಿಕ ಜಯ ಸಾಧಿಸಿದೆ. ಈ ಬೃಹತ್ ರನ್ ಚೇಸ್ ಇತಿಹಾಸದ ನಾಲ್ಕನೇ ಯಶಸ್ವಿ ಚೇಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಮುಂಬೈ ಪರ ಬ್ಯಾಟಿಂಗ್ ಅಬ್ಬರ ಜೋರಾಗಿತ್ತು. ರಯಾನ್ ರಿಕೆಲ್ಟನ್ ಕೇವಲ 55 ಎಸೆತಗಳಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್ಗಳ ನೆರವಿನಿಂದ ಅಜೇಯ 123 ರನ್ ಚಚ್ಚಿದರು. ವಿಲ್ ಜಾಕ್ಸ್ ಕೂಡ 46 ರನ್ಗಳ ಕೊಡುಗೆ ನೀಡಿದರು. ಇದರಿಂದ ಮುಂಬೈ 20 ಓವರ್ಗಳಲ್ಲಿ 243 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
244 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಹೈದರಾಬಾದ್, ಬ್ಯಾಟರ್ಗಳ ಸಿಡಿಲಬ್ಬರದ ಆಟಕ್ಕೆ ಸಾಕ್ಷಿಯಾಯಿತು. ಟ್ರಾವಿಸ್ ಹೆಡ್ ಕೇವಲ 30 ಎಸೆತಗಳಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್ಗಳೊಂದಿಗೆ ಸ್ಫೋಟಕ 76 ರನ್ ಗಳಿಸಿದರು. ಅಭಿಷೇಕ್ ಶರ್ಮಾ (45 ರನ್) ಬಿರುಸಿನ ಆರಂಭ ಒದಗಿಸಿದರು. ನಂತರ ಬಂದ ಹೆನ್ರಿಕ್ ಕ್ಲಾಸೆನ್ ಕೇವಲ 30 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ಗಳೊಂದಿಗೆ ಅಜೇಯ 65 ರನ್ ಸಿಡಿಸಿ ಪಂದ್ಯ ಮುಗಿಸಿದರು.
ಅಂತಿಮವಾಗಿ ಹೈದರಾಬಾದ್ 18.4 ಓವರ್ಗಳಲ್ಲಿ 249 ರನ್ ಗಳಿಸಿ ಚಾರಿತ್ರಿಕ ಜಯ ಗಳಿಸಿತು. ಈ ಗೆಲುವಿನೊಂದಿಗೆ ಹೈದರಾಬಾದ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ, ಮುಂಬೈ 9ನೇ ಸ್ಥಾನದಲ್ಲಿದೆ. ಕ್ಲಾಸೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.






