ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಗುಜರಾತ್ ಟೈಟನ್ಸ್ (GT) 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

​ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಗುಜರಾತ್ ಟೈಟನ್ಸ್ ಬೌಲರ್‌ಗಳ ಸಂಘಟಿತ ದಾಳಿಗೆ ಸಿಲುಕಿದ ಆರ್‌ಸಿಬಿ, 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಸರ್ವಪತನ ಕಂಡಿತು. ಆರ್‌ಸಿಬಿ ಪರ ದೇವದತ್ ಪಡಿಕ್ಕಲ್ (24 ಎಸೆತಗಳಲ್ಲಿ 40 ರನ್) ಹಾಗೂ ವಿರಾಟ್ ಕೊಹ್ಲಿ (13 ಎಸೆತಗಳಲ್ಲಿ 28 ರನ್) ಬಿಟ್ಟರೆ ಉಳಿದ ಬ್ಯಾಟರ್‌ಗಳು ಅಬ್ಬರಿಸಲಿಲ್ಲ. ಗುಜರಾತ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಅರ್ಷದ್ ಖಾನ್ ಕೇವಲ 22 ರನ್ ನೀಡಿ 3 ವಿಕೆಟ್ ಕಿತ್ತರೆ, ರಶೀದ್ ಖಾನ್ ಮತ್ತು ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಪಡೆದು ಮಿಂಚಿದರು.

​156 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್, ಕೇವಲ 15.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು. ಶುಭಮನ್ ಗಿಲ್ (18 ಎಸೆತಗಳಲ್ಲಿ 43 ರನ್) ಮತ್ತು ಜೋಸ್ ಬಟ್ಲರ್ (19 ಎಸೆತಗಳಲ್ಲಿ 39 ರನ್) ಸ್ಪೋಟಕ ಆರಂಭ ಒದಗಿಸುವ ಮೂಲಕ ಭದ್ರ ಬುನಾದಿ ಹಾಕಿದರು. ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿಸಿ ಭರವಸೆ ಮೂಡಿಸಿದರೂ, ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತೆವಾಟಿಯಾ (ಅಜೇಯ 27 ರನ್) ಆಕ್ರಮಣಕಾರಿ ಆಟವಾಡಿ ಗುಜರಾತ್‌ಗೆ ಗೆಲುವಿನ ಕಿರೀಟ ತೊಡಿಸಿದರು.

Leave a Reply

Your email address will not be published. Required fields are marked *