ಮಡಿಕೇರಿ: ಮಡಿಕೇರಿ-ಮಂಗಳೂರು ಹೆದ್ದಾರಿಯ ತಿರುವಿನಲ್ಲಿ ಇಂದು ಮುಂಜಾನೆ ‘ಪೂರ್ಣಿಮಾ’ ಹೆಸರಿನ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಗುದ್ದಿ ಅಪಘಾತ ಸಂಭವಿಸಿದೆ. ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಏಕಾಏಕಿ ತೀವ್ರ ಹೃದಯಾಘಾತವಾದ ಹಿನ್ನೆಲೆಯಲ್ಲಿ ಬಸ್ ನಿಯಂತ್ರಣ ಕಳೆದುಕೊಂಡಿದೆ ಎಂದು ವರದಿಯಾಗಿದೆ.

ಸ್ಟೀರಿಂಗ್ ಮೇಲಿನ ನಿಯಂತ್ರಣ ತಪ್ಪಿದ ಪರಿಣಾಮ, ಬಸ್ ರಭಸವಾಗಿ ಹೋಗಿ ಗುಡ್ಡಕ್ಕೆ (ಬರೆಗೆ) ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹೃದಯಾಘಾತಕ್ಕೊಳಗಾದ ಚಾಲಕನ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.






