ಬೆಂಗಳೂರು: ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಅತ್ಯಂತ ಕಾತುರದಿಂದ ಕಾಯುತ್ತಿರುವ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆ-1ರ ಫಲಿತಾಂಶ ನಾಳೆ ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಕಚೇರಿಯಲ್ಲಿ ನಾಳೆ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಸಚಿವರು ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ ರಾಜ್ಯದ ಒಟ್ಟಾರೆ ಉತ್ತೀರ್ಣ ಪ್ರಮಾಣ, ಜಿಲ್ಲಾವಾರು ಸಾಧನೆ, ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಸೇರಿದಂತೆ ಟಾಪರ್‌ಗಳ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಆನ್‌ಲೈನ್ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಆನ್‌ಲೈನ್‌ನಲ್ಲಿ ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ?
- ಕರ್ನಾಟಕ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ ‘SSLC Examination-1 Results’ (ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ) ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಪರೀಕ್ಷೆಯ ನೋಂದಣಿ ಸಂಖ್ಯೆ (Register Number) ಮತ್ತು ಜನ್ಮ ದಿನಾಂಕವನ್ನು (Date of Birth) ನಿಖರವಾಗಿ ನಮೂದಿಸಿ.
- ’Submit’ ಅಥವಾ ‘ಸಲ್ಲಿಸಿ’ ಬಟನ್ ಕ್ಲಿಕ್ ಮಾಡಿ.
- ನಿಮ್ಮ ಸಂಪೂರ್ಣ ಅಂಕಪಟ್ಟಿ ಪರದೆಯ ಮೇಲೆ ಮೂಡುತ್ತದೆ. ಮುಂದಿನ ಶೈಕ್ಷಣಿಕ ಉಪಯೋಗಕ್ಕಾಗಿ ಫಲಿತಾಂಶದ ಪ್ರಿಂಟೌಟ್ ಅಥವಾ ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.
ಈ ಬಾರಿ ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು.




