
ಒಂದೇ ಫ್ಲೆಕ್ಸ್‌ನಲ್ಲಿ ರೊನಾಲ್ಡೊ, ಮೆಸ್ಸಿ, ನೈಮರ್ — ಒಗ್ಗಟ್ಟಿನ ಸಂದೇಶ ಸಾರಿದ ‘ಅಮಿಗೋಸ್ ಎಫ್.ಸಿ’
ಸುಳ್ಯ: ಜಗತ್ತಿನಾದ್ಯಂತ ಈ ವರ್ಷ ಫಿಫಾ ವಿಶ್ವಕಪ್ ಫುಟ್‌ಬಾಲ್ ಹಬ್ಬದ ಸಂಭ್ರಮ ಮನೆಮಾಡಿದ್ದು, ಕರಾವಳಿಯ ಫುಟ್‌ಬಾಲ್ ಪ್ರೇಮಿಗಳು ಕೂಡಾ ಇದರಿಂದ ಹೊರತಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೈಚಾರ್‌ನಲ್ಲಿ ಫುಟ್‌ಬಾಲ್ ಫೀವರ್ ಜೋರಾಗಿದ್ದು, ಸ್ಥಳೀಯ ‘ಅಮಿಗೋಸ್ ಎಫ್.ಸಿ’ (Amigos FC) ಕ್ಲಬ್‌ನ ಯುವಕರು ವಿಶಿಷ್ಟವಾದ ಫ್ಲೆಕ್ಸ್ ಅಳವಡಿಸುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.
ಈ ಬಾರಿಯ ವಿಶ್ವಕಪ್‌ಗಾಗಿ ಪೈಚಾರ್‌ನ ಅಮಿಗೋಸ್ ಎಫ್.ಸಿ ಕ್ಲಬ್ ಸದಸ್ಯರು ಕ್ರೀಡೆಯಲ್ಲಿನ ಅಭಿಮಾನಿ ಪೈಪೋಟಿಯನ್ನು ಬದಿಗೊತ್ತಿ, ವಿಶಿಷ್ಟ ಹೆಜ್ಜೆಯನ್ನಿಟ್ಟಿದ್ದಾರೆ. ವಿಶ್ವ ಫುಟ್‌ಬಾಲ್‌ನ ದಿಗ್ಗಜ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಮತ್ತು ನೈಮರ್ ಜೂನಿಯರ್ — ಈ ಮೂವರೂ ಆಟಗಾರರ ಅಭಿಮಾನಿಗಳು ಇಲ್ಲಿ ಒಂದಾಗಿದ್ದಾರೆ. ಮೂವರನ್ನೂ ಒಳಗೊಂಡ ಆಕರ್ಷಕ ಫ್ಲೆಕ್ಸ್ ಅನ್ನು ಪೈಚಾರ್‌ನಲ್ಲಿ ರಾರಾಜಿಸುವಂತೆ ಅಳವಡಿಸಲಾಗಿದ್ದು, ಫುಟ್‌ಬಾಲ್ ಕ್ರೀಡೆಯು ಎಲ್ಲರನ್ನೂ ಬೆಸೆಯುವ ಸಾಧನ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕಳೆದ ಬಾರಿ ರೊನಾಲ್ಡೊ, ಈ ಬಾರಿ ಮೂರು ಆಟಗಾರರ ದರ್ಬಾರ್!
ಕಳೆದ ಫಿಫಾ ವಿಶ್ವಕಪ್ ಸಂದರ್ಭದಲ್ಲಿ ಇದೇ ಪೈಚಾರ್ ಅಮಿಗೋಸ್ ತಂಡದವರು ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಬೃಹತ್ ಕಟೌಟ್ ನಿಲ್ಲಿಸಿ ಸುದ್ದಿಯಾಗಿದ್ದರು. ಕಳೆದ ಬಾರಿ ಕೇವಲ ರೊನಾಲ್ಡೊ ಕಟೌಟ್, ಮೆಸ್ಸಿ ಹಾಗೂ ನೆಮೈಮರ್ ಅವರ ಫ್ಲೆಕ್ಸ್ ಕಂಗೊಳಿಸುತ್ತಿದ್ದ ಪೈಚಾರ್, ಈ ಬಾರಿ ಯಾವುದೇ ಒಂದು ತಂಡ ಅಥವಾ ಆಟಗಾರನಿಗೆ ಸೀಮಿತವಾಗಿಲ್ಲ.
ಬದಲಾಗಿ, ಜಾಗತಿಕ ಫುಟ್‌ಬಾಲ್‌ನ ಪ್ರಮುಖ ಮೂರು ದಿಗ್ಗಜರನ್ನು ಒಂದೇ ಫ್ಲೆಕ್ಸ್‌ನಲ್ಲಿ ಒಟ್ಟು ಸೇರಿಸುವ ಮೂಲಕ ಸ್ಥಳೀಯ ಯುವಕರು ಕ್ರೀಡಾ ಸ್ಪೂರ್ತಿಯನ್ನು ಮೆರೆದಿದ್ದಾರೆ.
ಫುಟ್‌ಬಾಲ್ ಎಂದರೆ ಒಗ್ಗಟ್ಟು
ಮೆಸ್ಸಿ, ರೊನಾಲ್ಡೊ ಹಾಗೂ ನೈಮರ್ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಆಟಗಾರರ ಅಭಿಮಾನಿಗಳ ನಡುವೆ ಯಾವಾಗಲೂ ತೀವ್ರ ಪೈಪೋಟಿ, ವಾದ-ವಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ ಪೈಚಾರ್‌ನ ಅಮಿಗೋಸ್ ಕ್ಲಬ್‌ನ ಈ ಪ್ರಯತ್ನವು, “ಆಟಗಾರರು ಬೇರೆಯಾದರೂ ಫುಟ್‌ಬಾಲ್ ಮೇಲಿನ ಪ್ರೀತಿ ನಮ್ಮೆಲ್ಲರನ್ನೂ ಒಗ್ಗೂಡಿಸುತ್ತದೆ” ಎಂಬ ಸುಂದರ ಸಂದೇಶವನ್ನು ಸಾರಿದೆ.
ಸದ್ಯ ಪೈಚಾರ್‌ನಲ್ಲಿ ಅಳವಡಿಸಲಾಗಿರುವ ಈ ವಿಶೇಷ ಫ್ಲೆಕ್ಸ್ ದಾರಿಹೋಕರ ಹಾಗೂ ಸ್ಥಳೀಯರ ಕಣ್ಮನ ಸೆಳೆಯುತ್ತಿದ್ದು, ಕರಾವಳಿಯ ಫುಟ್‌ಬಾಲ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.







