ಸುಳ್ಯ: ನಗರ ವ್ಯಾಪ್ತಿಯಲ್ಲಿ ಹರಿಯುವ ನದಿ ಹಾಗೂ ಹೊಳೆಗಳಿಗೆ ಸೇರುತ್ತಿರುವ ಮಲಿನ ನೀರು ಮತ್ತು ತ್ಯಾಜ್ಯವನ್ನು ತಡೆಗಟ್ಟಿ, ‘ಐ & ಡಿ’ (ಇಂಟರ್ ಸೆಪ್ಷನ್ ಮತ್ತು ಡೈವರ್ಷನ್) ತಂತ್ರಜ್ಞಾನದ ಮೂಲಕ ಸಂಸ್ಕರಿಸಲು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುದಾನ ಒದಗಿಸುವಂತೆ ಸುಳ್ಯ ನಗರ ಯೋಜನಾ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಕೆ.ಎಂ. ಮುಸ್ತಫಾ ಅವರು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.

​ಸುಳ್ಯ ನಗರವು ವಿಶಿಷ್ಟ ಭೌಗೋಳಿಕ ಹಿನ್ನೆಲೆ ಹೊಂದಿದ್ದು, ಎತ್ತರ ಮತ್ತು ತಗ್ಗು ಪ್ರದೇಶಗಳಿಂದ ಕೂಡಿದೆ. ಪಯಸ್ವಿನಿ ನದಿ, ಕಂಡಡ್ಕ ಹೊಳೆ ಹಾಗೂ ಕನಿಕರ ಪಳ್ಳದಂತಹ ಹಳ್ಳಗಳು ನಗರದ ಮೂಲಕ ಹರಿದು ಹೋಗುತ್ತವೆ. ಪ್ರಸ್ತುತ ನಗರದ ಚರಂಡಿ ಮತ್ತು ಕಾಲುವೆಗಳಲ್ಲಿ ಹರಿಯುವ ಮಲಿನ ನೀರು ನೇರವಾಗಿ ಈ ಜಲಮೂಲಗಳನ್ನು ಸೇರುತ್ತಿದೆ. ಇದನ್ನು ತಪ್ಪಿಸಲು, ತ್ಯಾಜ್ಯ ನೀರು ನದಿಗೆ ಸೇರುವ ನಾಲ್ಕೈದು ಪ್ರಮುಖ ಸ್ಥಳಗಳಲ್ಲಿ ‘ಐ & ಡಿ’ ತಂತ್ರಜ್ಞಾನವನ್ನು ಬಳಸಿ ಕಡಿಮೆ ಜಾಗದಲ್ಲಿ ಮಿನಿ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಕಾಮಗಾರಿ ಕೈಗೊಳ್ಳುವಂತೆ ಅವರು ಸಚಿವರನ್ನು ಒತ್ತಾಯಿಸಿದರು.

​ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWS) ಮಾರ್ಗದರ್ಶನದಲ್ಲಿ ಹಾಗೂ KUIDFC ಮೂಲಕ ರಾಜ್ಯದ ವಿವಿಧ ನಗರಗಳಲ್ಲಿ ಈಗಾಗಲೇ ಇಂತಹ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಶಿಕ್ಷಣ ಕಾಶಿ, ಪ್ರಮುಖ ವಾಣಿಜ್ಯ ಕೇಂದ್ರ (ರಬ್ಬರ್, ಅಡಿಕೆ), ಪ್ರವಾಸಿ ತಾಣ ಹಾಗೂ ಕೊಡಗು-ಕೇರಳದ ಗಡಿ ಪ್ರದೇಶವಾಗಿರುವ ಸುಳ್ಯ ನಗರಕ್ಕೂ ಈ ಮಾದರಿಯ ಯೋಜನೆ ಅತ್ಯಂತ ಅವಶ್ಯಕವಾಗಿದೆ ಎಂದು ಮುಸ್ತಫಾ ಅವರು ವಿವರಿಸಿದರು.

ಸಚಿವರ ಸಕಾರಾತ್ಮಕ ಸ್ಪಂದನೆ

​ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಭೈರತಿ ಸುರೇಶ್ ಅವರು, ಸುಳ್ಯ ನಗರವನ್ನು ಈ ಯೋಜನೆಯ ನೆಟ್‌ವರ್ಕ್‌ಗೆ ಸೇರಿಸಲು ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಲು ಶೀಘ್ರದಲ್ಲೇ ತಜ್ಞರ ತಂಡವನ್ನು ಸುಳ್ಯಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ.

ಏನಿದು ಇಂಟರ್ ಸೆಪ್ಷನ್ ಮತ್ತು ಡೈವರ್ಷನ್ (I&D) ತಂತ್ರಜ್ಞಾನ?

​ನದಿ ಮತ್ತು ಕಾಲುವೆಗಳ ಮಾಲಿನ್ಯವನ್ನು ತಡೆಗಟ್ಟುವ ಅತ್ಯಾಧುನಿಕ ಹಾಗೂ ಸರಳ ವಿಧಾನವೇ ‘ಐ & ಡಿ’ ತಂತ್ರಜ್ಞಾನ.

  • ಕಾರ್ಯವಿಧಾನ: ಹೊರ ಚರಂಡಿ, ತೋಡು ಹಾಗೂ ಹಳ್ಳಗಳ ಮೂಲಕ ನದಿಗೆ ಸೇರುವ ಮಲಿನ ನೀರನ್ನು ಜೈವಿಕ ಅಥವಾ ಇತರ ತಾಂತ್ರಿಕ ವಿಧಾನಗಳ ಮೂಲಕ ತಡೆಹಿಡಿಯಲಾಗುತ್ತದೆ (Interception).
  • ​ಬಳಿಕ ಪೈಪ್‌ಲೈನ್ ಮತ್ತು ಟ್ಯಾಂಕ್‌ಗಳನ್ನು ಅಳವಡಿಸಿ, ಕಡಿಮೆ ಜಾಗದಲ್ಲಿ ಮಿನಿ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ, ಆ ತ್ಯಾಜ್ಯವನ್ನು ಒಳಚರಂಡಿ ಪ್ಲಾಂಟ್‌ಗಳಿಗೆ ಸಾಗಿಸಲಾಗುತ್ತದೆ (Diversion).
  • ಪ್ರಯೋಜನ: ಇದರಿಂದ ನದಿ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದ್ದು, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ರಕ್ಷಣೆ ಸಾಧ್ಯವಾಗಲಿದೆ. ಸಣ್ಣ ಸಣ್ಣ ಪಟ್ಟಣಗಳಲ್ಲಿ ಈ ತಂತ್ರಜ್ಞಾನ ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೆ.ಎಂ. ಮುಸ್ತಫಾ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *