ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 31ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡವು 47 ರನ್ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ಧಾರವನ್ನು ಹೈದರಾಬಾದ್ ಬ್ಯಾಟರ್ಗಳು ತಲೆಕೆಳಗಾಗುವಂತೆ ಮಾಡಿದರು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಅಜೇಯ ಶತಕದ (68 ಎಸೆತಗಳಲ್ಲಿ 135 ರನ್, 10 ಬೌಂಡರಿ, 10 ಸಿಕ್ಸರ್) ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 242 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಕೊನೆಯಲ್ಲಿ ಹೆನ್ರಿಕ್ ಕ್ಲಾಸೆನ್ ಕೇವಲ 13 ಎಸೆತಗಳಲ್ಲಿ ಅಜೇಯ 37 ರನ್ ಸಿಡಿಸಿ ಮಿಂಚಿದರು. ಟ್ರಾವಿಸ್ ಹೆಡ್ 37 ರನ್ ಹಾಗೂ ಇಶಾನ್ ಕಿಶನ್ 25 ರನ್ ಗಳಿಸಿ ಉತ್ತಮ ಸಾಥ್ ನೀಡಿದರು.
243 ರನ್ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಪರ ನಿತೀಶ್ ರಾಣಾ 57 ರನ್, ಸಮೀರ್ ರಿಜ್ವಿ 41 ರನ್ ಮತ್ತು ಕೆ.ಎಲ್. ರಾಹುಲ್ 37 ರನ್ ಗಳಿಸಿ ಹೋರಾಟ ನಡೆಸಿದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಹೈದರಾಬಾದ್ ಪರ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಎಶಾನ್ ಮಾಲಿಂಗ 32 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದು ಮಿಂಚಿದರೆ, ಹರ್ಷ್ ದುಬೆ 3 ವಿಕೆಟ್ ಕಬಳಿಸಿ ಡೆಲ್ಲಿ ತಂಡದ ಪತನಕ್ಕೆ ಕಾರಣರಾದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮಾ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ಟೂರ್ನಿಯಲ್ಲಿ ಸತತ ಮೂರನೇ ಜಯ ದಾಖಲಿಸಿದೆ.




